ವಿಜಯವಾಣಿ ಸುದ್ದಿಜಾಲ ಬೈಂದೂರು
ಸರ್ಕಾರದ ಯೋಜನೆ ಜನರಿಗೆ ತಲುಪಿಸುವುದು ಒಂದು ಭಾಗವಾದರೆ ಜತೆಗೆ ಸರ್ಕಾರದ ಕೆಲವು ನೀತಿ ಜನ ಸಾಮಾನ್ಯರಿಗೆ ಮಾರಕವಾಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭ ಹೋರಾಟ ರೂಪಿಸಬೇಕಾಗುತ್ತದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಕುಂದಾಪುರದಲ್ಲಿ ಬೈಂದೂರು ಶಾಸಕರ ನೇತೃತ್ವದಲ್ಲಿ ಹಿರಿಯ ವಕೀಲರು, ಕಾನೂನು ತಜ್ಞರನ್ನು ಒಳಗೊಂಡು ನಡೆದ ಬೈಂದೂರು ಫೌಂಡೇಶನ್ ಸಭೆಯಲ್ಲಿ ಮಂಗಳವಾರ ಮಾತನಾಡಿದರು.
ಬೈಂದೂರು ಫೌಂಡೇಶನ್ ವತಿಯಿಂದ ಕಸ್ತೂರಿರಂಗನ್ ವರದಿ ಅನುಷ್ಠಾನದಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಗೆ ಎದುರಾಗುವ ಸಮಸ್ಯೆ ತಡೆಯುವ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೆ ವೇದಿಕೆ ಸಿದ್ಧಮಾಡಿಕೊಳ್ಳುತ್ತಿದ್ದೇವೆ. ಅದಕ್ಕೆ ಬೇಕಾದ ದಾಖಲೆ, ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಇದರ ಜತೆಗೆ ಫೌಂಡೇಶನ್ ಮೂಲಕ ಸಿಆರ್‌ಜಡ್, ಡೀಮ್ಡ್ ಫಾರೆಸ್ಟ್ ಇತ್ಯಾದಿ ಸಮಸ್ಯೆಗಳ ಬಗ್ಗೆಯೂ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ. ಕಸ್ತೂರಿರಂಗನ್ ವರದಿ ಅನುಷ್ಠಾನ ಆಗದಂತೆ ನೋಡಿಕೊಳ್ಳುವುದು, ವನ್ಯಜೀವಿ (ಡೀಮ್ಡ್ ಫಾರೆಸ್ಟ್), ಸಿಆರ್‌ಜಡ್, ಮರಳುಗಾರಿಕೆ, ಕಲ್ಲು ಗಣಿಗಾರಿಕೆ ಇತ್ಯಾದಿಗಳಿಂದ ಕ್ಷೇತ್ರದ ಜನ ಸಾಮಾನ್ಯರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸುವುದು ಇದರ ಉದ್ದೇಶ ಎಂದರು.
ವಕೀಲರಾದ ಟಿ.ಬಿ.ಶೆಟ್ಟಿ, ಗುರುಮೂರ್ತಿ, ಕುಂದಾಪುರ ವಕೀಲರ ಸಂಘ ಅಧ್ಯಕ್ಷ ಪ್ರಮೋದ್ ಹಂದೆ, ರಮೇಶ್ ಹತ್ವಾರ್, ಸಾಜಿ ಅಬ್ರಾಹಂ, ರಾಘವೇಂದ್ರ ಮಾತನಾಡಿದರು. ವಕೀಲರ ಸಂಘದ ಕೆ.ಬಿ.ಶೆಟ್ಟಿ, ಶರತ್ ಶೆಟ್ಟಿ, ಪ್ರವೀಶ್ ಚಂದ್ರ, ಪ್ರಶಾಂತ್ ಶೆಟ್ಟಿ, ರಜನಿಕಾಂತ್, ಫೌಂಡೇಷನ್ ಸಂಯೋಜಕ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ರವಿಚಂದ್ರ ಹಾಗೂ ಹಿರಿಯ ಕಿರಿಯ ವಕೀಲರು, ಕಾನೂನು ತಜ್ಞರು ಉಪಸ್ಥಿತರಿದ್ದರು.
ಸುದೀರ್ಘ ಚರ್ಚೆ
ಬೈಂದೂರು ಕ್ಷೇತ್ರಕ್ಕೆ ಹೆಚ್ಚು ಸಮಸ್ಯೆ ನೀಡುತ್ತಿರುವ ಸಿಆರ್‌ಜಡ್, ಡೀಮ್ಡ್ ಫಾರೆಸ್ಟ್(ವನ್ಯಜೀವಿ), ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಮುಂದಾಗಿರುವ ವಿಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಶೀಘ್ರ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಹಿರಿಯ ವಕೀಲರನ್ನು ಭೇಟಿ ಮಾಡಿ ಈ ವಿಷಯ ಕುರಿತು ಇನ್ನಷ್ಟು ಚರ್ಚೆ ಮಾಡುವ ಬಗ್ಗೆ ನಿರ್ಧರಿಸಲಾಯಿತು.