ವಧು-ವರರಿಗೆ ಸಿಹಿ ಸುದ್ದಿ: 'ಸಪ್ತಪದಿ'ಗೆ ಮುಹೂರ್ತ​ ಫಿಕ್ಸ್​

marriage
Published on

ಬೆಂಗಳೂರು: ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವತಿಯಿಂದ ಏರ್ಪಡಿಸುವ 'ಸಪ್ತಪದಿ' ಯೋಜನೆಯ ಮುಹೂರ್ತವನ್ನು ಸರ್ಕಾರ ನಿಗದಿ ಮಾಡಿದೆ.

'ಎ' ದರ್ಜೆ 110 ದೇವಸ್ಥಾನಗಳ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸುವ ಯೋಜನೆ ಇದಾಗಿದೆ. ಕಳೆದ ಏಪ್ರಿಲ್​ 26 ಮತ್ತು ಮೇ 24ರಂದು ಮದುವೆಗಳು ನಡೆಯಬೇಕಿತ್ತು. ಆದರೆ ಕರೊನಾ ವೈರಸ್​ ಹಾಗೂ ಲಾಕ್​ಡೌನ್​ ಹಿನ್ನೆಲೆಯಲ್ಲಿ, ದಿನಾಂಕಗಳನ್ನು ಮುಂದೂಡಲಾಗಿತ್ತು.

ಇದೀಗ ಜುಲೈ ಮತ್ತು ಆಗಸ್ಟ್​ ತಿಂಗಳಿನಲ್ಲಿ ಮುಹೂರ್ತವನ್ನು ಸರ್ಕಾರ ನಿಗದಿ ಮಾಡಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಮದುವೆಗೆ ನೊಂದಾಯಿಸಿದ ವಧು, ವರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಒಪ್ಪಿಗೆ ಪತ್ರ ಪಡೆದು ನಿಗದಿತ ದಿನದಂದು ಸಾಮೂಹಿಕ ಮದುವೆ ಆಯೋಜಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಜುಲೈ 23, 26, 29 ಹಾಗೂ ಆಗಸ್ಟ್ 6, 10, 14, 17 ರಂದು ಒಳ್ಳೆಯ ಮುಹೂರ್ತ ಇದ್ದು, ಈ ಪೈಕಿ ಎರಡು ದಿನಾಂಕಗಳನ್ನು ನಿಗದಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ ಒಂದೂವರೆ ಸಾವಿರಕ್ಕೂ ಅಧಿಕ ವಧು-ವರರು ಸಪ್ತಪದಿ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇಲ್ಲಿಯವರೆಗಿನ ನಿಯಮದಂತೆ ವರನಿಗೆ ಹಾರ ಬಟ್ಟೆ ಖರೀದಿಗೆ 5000 ರೂ. ವಧುವಿನ ಬಟ್ಟೆ ಖರೀದಿಗೆ 10 ಸಾವಿರ ರೂ. ಮತ್ತು ತಾಳಿಗೆ 40 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಮದುವೆ ದಿನವೇ ವಧು-ವರರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ನಿಗದಿಯಂತೆ ಮುಜರಾಯಿ ಇಲಾಖೆ ಎ ದರ್ಜೆ ದೇವಾಲಯಗಳಲ್ಲಿ ಮದುವೆ ನಡೆಯಲಿವೆ. ಕರೊನಾ ಭೀತಿ ಇನ್ನೂ ಮಾಸದ ಹಿನ್ನೆಲೆಯಲ್ಲಿ ಎಲ್ಲಾ ನಿಮಯಗಳ ಅನ್ವಯವೇ ಮದುವೆ ಮಾಡಲಾಗಲು ಯೋಜನೆ ರೂಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net