ಆಟೋ, ಟ್ಯಾಕ್ಸಿ ಚಾಲಕರು ಇಷ್ಟೆಲ್ಲ ‘ಸಾಕ್ಷ್ಯಾಧಾರ’ ಕೊಟ್ಟರೆ ಮಾತ್ರ 5 ಸಾವಿರ ರೂ. ಸಿಗುತ್ತೆ!

auto
Published on

ಬೆಂಗಳೂರು: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ 5 ಸಾವಿರ ರೂ. ಪರಿಹಾರ ಧನ ಆಟೋ, ಟ್ಯಾಕ್ಸಿ ಚಾಲಕರಿಗೆ ಗಗನ ಕುಸುಮದಂತೆ ಭಾಸವಾಗುತ್ತಿದೆ.

ಆಧುನಿಕ ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ, ಸೇವಾ ಸಿಂಧು ಪೋರ‌್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕೆಂಬ ಷರತ್ತನ್ನು ಪಾಲಿಸಲು ಚಾಲಕರು ಸಿದ್ಧರಾಗಿದ್ದಾರೆ. ಆದರೆ ಶನಿವಾರ ರಾಜ್ಯ ಸರ್ಕಾರ ಹೊರಡಿಸಿರುವ ಇನ್ನಷ್ಟು ಷರತ್ತುಗಳು ಅವರನ್ನು ಕಂಗೆಡಿಸಿವೆ.

2020ರ ಮಾರ್ಚ್ 24ರಂದು ಅನ್ವಯವಾಗುವಂತೆ ಡ್ರೈವಿಂಗ್ ಲೈಸೆನ್ಸ್ ಮತ್ತು ಫಿಟ್‌ನೆಸ್ ಸರ್ಟಿಫಿಕೇಟ್ ಹೊಂದಿರುವ ವಾಹನಗಳಿಗೆ ಮಾತ್ರ ಈ ಪರಿಹಾರಧನ ಅನ್ವಯವಾಗುತ್ತದೆ. ಅಂದು ಚಾಲ್ತಿಯಲ್ಲಿದ್ದ ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಗಿಂತ ಹೆಚ್ಚು ಫಲಾನುಭವಿಗಳು ಇಲ್ಲದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸರ್ಕಾರ ಆದೇಶಿಸಿದೆ.

ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಸಂಖ್ಯೆ ಈ ಮೂರೂ ಅಂಶಗಳು ಎಲ್ಲಾ ಫಲಾನುಭವಿಗಳಿಗೆ ಅನನ್ಯವಾಗಿರಬೇಕು ಎಂದೂ ಸೂಚಿಸಲಾಗಿದೆ. ಅದರರ್ಥ, ಒಂದೇ ವಾಹನವನ್ನು ಇಬ್ಬರು, ಮೂವರು ಚಾಲಕರು ಪಾಳಿಯ ಮೇಲೆ ಓಡಿಸುತ್ತಿದ್ದರೆ ಅವರಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ಸಿಗಲು ಸಾಧ್ಯ.

ಕೆಲವರು ಒಂದಕ್ಕಿಂತ ಹೆಚ್ಚು ಆಟೋ, ಟ್ಯಾಕ್ಸಿಗಳನ್ನು ಇಟ್ಟುಕೊಂಡಿರುತ್ತಾರೆ. ಅಂತಹ ಆಟೋ, ಟ್ಯಾಕ್ಸಿ ಮಾಲೀಕರಿಗೆ ಪರಿಹಾರ ಧನ ಸಂದಾಯವಾದರೆ ನಿಜಕ್ಕೂ ಜೀವನ ನಿರ್ವಹಣೆ ಕಷ್ಟವಾಗಿರುವ ಚಾಲಕರಿಗೆ ಪರಿಹಾರಧನ ಸಿಗದಂತಾಗುತ್ತದೆ. ಒಬ್ಬರೇ ಎರಡೆರಡು ವಾಹನಗಳ ಸಂಖ್ಯೆ ನೀಡಿ ಪರಿಹಾರಧನ ಪಡೆಯುವುದನ್ನು ತಪ್ಪಿಸುವುದಕ್ಕಾಗಿ ಬ್ಯಾಂಕ್ ಖಾತೆಗೆ ಫಲಾನುಭವಿಗಳ ಆಧಾರ್, ಪ್ಯಾನ್ ಕಾರ್ಡ್ ಲಿಂಕ್ ಆಗಿರುವುದನ್ನು ಗಮನಿಸಬೇಕು ಎಂದು ಸೂಚಿಸಲಾಗಿದೆ.

ಫಲಾನುಭವಿಗಳ ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ ಅಂತಹವರಿಗೆ ಪರಿಹಾರಧನ ನೀಡಬಾರದು. ಲಾಕ್‌ಡೌನ್ ಅವಧಿಯಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎಂಬುದನ್ನು ಸ್ವಯಂ ದೃಢೀಕರಣದಿಂದ ಖಚಿತಪಡಿಸಿಕೊಂಡು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಬೇಕು ಎಂದು ಎಂದೂ ಸರ್ಕಾರ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net