ಪತ್ನಿ, ಮಗ ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿ ಶವವಾಗಿ ಬಿದ್ದಿದ್ದ ಡಿಎಸ್​ಪಿ: ಅಷ್ಟಕ್ಕೂ ನಡೆದಿದ್ದಾರೂ ಏನು?

DSP
Published on

ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ಶ್ರೀಕಾಕುಳಂನ ಉಪ ಪೊಲೀಸ್ ವರಿಷ್ಠಾಧಿಕಾರಿ (ವಿಶೇಷ ವಿಭಾಗ)​ ಕೃಷ್ಣ ವರ್ಮಾ ಅವರು ವಿಶಾಖಪಟ್ಟಣಂ ತಮ್ಮ ನಿವಾಸದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವುದು ಕಂಡುಬಂದಿದೆ.

ಡಿಎಸ್​ಪಿ ವರ್ಮಾ ಮಗನಿಗೆ ಆರೋಗ್ಯದಲ್ಲಿ ಸಮಸ್ಯೆಯಿದ್ದುದ್ದರಿಂದ ಪತ್ನಿ ಮತ್ತು ಮಗ ಡಿಎಸ್​ಪಿಯನ್ನು ಮನೆಯಲ್ಲೇ ಬಿಟ್ಟು ಆಸ್ಪತ್ರೆಗೆ ಹೋಗಿದ್ದರು. ಮರಳಿ ಬಂದು ನೋಡಿದಾಗ ಡಿಎಸ್​ಪಿ ನೆಲದ ಮೇಲೆ ಶವವಾಗಿ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮುವಾಲಾ ವಾಣಿ ಪಲೇಮ್ (ಎಂವಿಪಿ)​ ಪೊಲೀಸ್​ ಠಾಣೆಯ ಪ್ರಾಥಮಿಕ ತನಿಖೆ ಪ್ರಕಾರ ಶುಕ್ರವಾರ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30ರ ನಡುವೆ ಸಾವು ಸಂಭವಿಸಿರಬಹುದೆಂದು ತಿಳಿಸಿದ್ದಾರೆ. ಸಾವಿನ ಬಗ್ಗೆ ಪೊಲೀಸರಿಗೆ ಮಧ್ಯಾಹ್ನ 2 ಗಂಟೆಗೆ ಮಾಹಿತಿ ತಿಳಿದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕೆಲವು ವರದಿಗಳ ಪ್ರಕಾರ ಡಿಎಸ್​ಪಿ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಹೇಳಲಾಗಿದೆ.

ಅಪರಾಧದ ಸನ್ನಿವೇಶವನ್ನು ವಿವರಿಸಿರುವ ಎಂವಿಪಿ ಠಾಣೆಯ ಸರ್ಕಲ್​ ಇನ್ಸ್​ಪೆಕ್ಟರ್​ ಷಣ್ಮುಖ ರಾವ್​, ಮನೆಯಲ್ಲಿ ನೇಣು ಹಾಕಿಕೊಳ್ಳಲು ಹಗ್ಗ ಕಟ್ಟುವಾಗ ಕುರ್ಚಿ ಅಥವಾ ಟೇಬಲ್​ನಿಂದ ಕೆಳಗೆ ಬಿದ್ದಂತೆ ಕಾಣುತ್ತದೆ. ಅಲ್ಲದೆ, ಕತ್ತಿನಲ್ಲಿ ಹಗ್ಗದು ಗುರುತು ಸಹ ಇದೆ. ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ಇದು ಆತ್ಮಹತ್ಯೆಯೋ ಎಂಬುದು ತನಿಖಾ ನಂತರವಷ್ಟೇ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ಮೃತದೇಹವನ್ನು ಕಿಂಗ್​ ಜಾರ್ಜ್ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ಅನಾರೋಗ್ಯದಿಂದ ಕೆಲ ದಿನಗಳಿಂದ ವರ್ಮಾ ಅವರು ರಜೆಯಲ್ಲಿದ್ದರು. ಅವರು ಶ್ವಾಸಕೋಸ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಷಣ್ಮುಖ ರಾವ್​ ಹೇಳಿದ್ದಾರೆ.

ವರದಿ ಪ್ರಕಾರ ಪೊಲೀಸ್​ ಇನ್ಸ್​ಪೆಕ್ಟರ್​ ಆಗಿ ಕೆಲಸ ಶುರು ಮಾಡಿದ ವರ್ಮಾ, ವೈಜಾಗ್​ ಮೂರು ಠಾಣೆಗಳಲ್ಲಿ ಇನ್ಸ್​ಪೆಕ್ಟರ್​ ಆಗಿದ್ದರು. ಶ್ರೀಕಾಕುಳಂಗೆ ವರ್ಗಾವಣೆ ಆಗುವ ಮುನ್ನ ವೈಜಾಗ್​ನಲ್ಲಿ ಸಹಾಯಕ ಪೊಲೀಸ್​ ಆಯುಕ್ತರಾಗಿ (ಸಂಚಾರಿ) ಸೇವೆ ಸಲ್ಲಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net