ಬೆಂಗಳೂರು: ಯಾದಗಿರಿ ನಗರ ಸೈಬರ್ ಠಾಣೆ ಪಿಎಸ್ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಈ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿದೆ.
ಪಿಎಸ್ಐ ಪರಶುರಾಮ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ. ಕುಟುಂಬಸ್ಥರು ಪರಶುರಾಮ್ ಅವರ ಸಾವಿಗೆ ಯಾದಗಿರಿ ಶಾಸಕ ಮತ್ತು ಅವರ ಪುತ್ರನೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಿಐಡಿ ವರ್ಗಾಯಿಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ಘಟನೆ ನಡೆದ 17 ಗಂಟೆಗಳ ಬಳಿಕ ಮೃತರ ಪತ್ನಿ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಪುತ್ರ ಪಂಪನಗೌಡ ವಿರುದ್ಧ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಂತೆ 352, 108 (3), 5, ಬಿಎನ್ಎಸ್ 2023 ಮತ್ತು ಕಲಂ 3(1), (ಆರ್), (ಎಸ್), 3 (ವಿ) ಸೇರಿದಂತೆ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.