ಶ್ರವಣ್ಕುಮಾರ್ ನಾಳ ಮಂಗಳೂರು
ರೈತರು, ಮಠಮಂದಿರಗಳ ಭೂಮಿಗಳನ್ನು ವಕ್ಪ್ ಸ್ವತ್ತೆಂದು ಘೋಷಿಸಿ ನೋಟಿಸ್ ನೀಡಿರುವ ವಿಚಾರ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿರುವಂತೆಯೇ, ರಾಜ್ಯದ 328 ಖಬರಸ್ತಾನಗಳಿಗೆ ಸುಮಾರು 2750 ಎಕರೆ ಕಂದಾಯ ಭೂಮಿ, ಸರ್ಕಾರಿ ಜಮೀನನ್ನು ಮಂಜೂರಾತಿ ನೀಡಲು ಮುಂದಾಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು, ರಾಯಚೂರು, ಕಲಬುರಗಿ, ಹಾಸನ, ದ.ಕ ಮತ್ತು ಉಡುಪಿ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಂದಾಯ, ಸರ್ಕಾರಿ ಭೂಮಿಯನ್ನು ಖಬರಸ್ತಾನವಾಗಿ ಪರಿವರ್ತಿಸುವ ಯೋಜನೆಗೆ ರಾಜ್ಯ ಸರ್ಕಾರ ಸಮ್ಮತಿ ನೀಡಿದೆ. ವಕ್ಪ್ ಅಧೀನದ ಮಸೀದಿ, ಪ್ರಾರ್ಥನಾ ಮಂದಿರದ ಅಧೀನದಲ್ಲಿರುವ ಖಬರಸ್ತಾನಗಳಿಗೆ ಸರ್ಕಾರಿ ಜಮೀನು ಮಂಜೂರಾತಿ ನೀಡಲು ತರಾತುರಿಯಲ್ಲಿ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಗೆ ಸರ್ಕಾರ ಸೂಚನೆ ನೀಡಿದೆ.
ಸಿಎಸ್ ಆದೇಶ: ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ವಕ್ಪ್ ಆಸ್ತಿಗಳ ಕಾರ್ಯಪಡೆಯ ಪ್ರಕಾರ್ಯಗಳಲ್ಲಿ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಮ್ಮ ಇಲಾಖೆಯಡಿ ವಕ್ಪ್ ಆಸ್ತಿಗಳ ನೋಂದಣಿ ಸಂಬಂಧಿಸಿ ಹಲವು ಅಂಶಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ವಕ್ಪ್ ರಾಜ್ಯ ಸರ್ಕಾರವನ್ನು ಕೋರಿತ್ತು. ಇದರಲ್ಲಿ ಕಂದಾಯ ಇಲಾಖೆಯಲ್ಲಿ 21,767 ವಕ್ಪ್ ಆಸ್ತಿಗಳ ಖಾತೆ ಬದಲಾವಣೆಯಾಗಬೇಕಿದೆ. ಈ ಆಸ್ತಿಗಳ ಮಾಹಿತಿಯನ್ನು ಭೂಮಿ ತಂತ್ರಾಂಶದಡಿ ನೋಂದಾಯಿಸುವುದು, ಕಂದಾಯ ಭೂಮಿಯನ್ನು ಖಬರಸ್ತಾನಗಳಿಗೆ ಮಂಜೂರಾತಿ ಮಾಡುವಂತೆ ಕೋರಿಕೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.
ದೇವಾಲಯಗಳಿಗೆ ಸುಣ್ಣ: ರಾಜ್ಯದ 34,223 ಸಿ ಗ್ರೇಡ್ ದೇವಾಲಯಗಳ ಸುತ್ತಲಿನ ಬಹುತೇಕ ಜಾಗ ಸರ್ಕಾರಿ ಭೂಮಿ. ಈ ಭೂಮಿಗೆ ದೇವಾಲಯದ ಹೆಸರಿನಲ್ಲಿ ಮಂಜೂರಾತಿ ನೀಡುವಂತೆ 2013ರಿಂದ ಧಾರ್ವಿುಕ ಪರಿಷತ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಲೇ ಇದೆ. ರಾಜ್ಯದ 5,730 ಪುರಾತನ ಧಾರ್ವಿುಕ ದೇವಾಲಯಕ್ಕೆ ಪಹಣಿ ಇಲ್ಲ. ಇವು ಇನ್ನೂ ಕಂದಾಯ ಇಲಾಖೆಯ ಭೂಮಿಯಲ್ಲೇ ಇವೆ. ಈ ದೇವಾಲಯಗಳಿಗೆ ಸಂಬಂಧಿಸಿದ ಜಾಗ 94ಸಿ, ಅಕ್ರಮ-ಸಕ್ರಮ ಮೂಲಕ, ಹಿಂದು ಹಾಗೂ ಹಿಂದುಯೇತರರಿಂದ ಅತಿಕ್ರಮಣವಾಗಿದೆ. 22,335 ದೇವಾಲಯಗಳ ಮೂಲ ಹೆಸರು ಪಹಣಿಯಲ್ಲಿ ದಾಖಲಾಗದೆ ಅಸ್ಪಷ್ಟ ರೀತಿಯಲ್ಲಿವೆ. ಗರ್ಭಗುಡಿ ಹಾಗೂ ಪ್ರಾಂಗಣವನ್ನು ಮಾತ್ರ ಪಹಣಿಯಲ್ಲಿ ಸೂಚಿಸಲಾಗಿದೆ. ಉಳಿದ ಜಾಗ ಸರ್ಕಾರಿ ಎಂದು ಪಹಣಿಯಲ್ಲಿ ದಾಖಲಾಗಿದೆ. ಆದರೆ ಕಂದಾಯ ಇಲಾಖೆ ದೇವಾಲಯದ ಹೆಸರಲ್ಲಿ ಭೂಮಿ ಮಂಜೂರಾತಿಗೆ ಕ್ರಮ ಕೈಗೊಂಡಿಲ್ಲ.
ಭೂಮಿ ಸಿಗದಿದ್ದರೆ?: ಒಂದೊಮ್ಮೆ ಖಬರಸ್ತಾನಕ್ಕೆ ಕಂದಾಯ, ಸರ್ಕಾರಿ ಭೂಮಿ ಲಭ್ಯವಿಲ್ಲದಿದ್ದರೆ ನಿಯಮಾನುಸಾರ ಖಾಸಗಿ ಜಮೀನು ಖರೀದಿಸಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರವೇ ಕಂದಾಯ ಇಲಾಖೆಗೆ ಸೂಚನೆ ನೀಡಿದೆ.
ಇಲಾಖೆ ಸೂಚನೆ ಏನು?
- ಸಿಎಸ್ ಸೂಚನೆಗೆ ಕಂದಾಯ ಇಲಾಖೆ ಸಮ್ಮತಿ
- ಹಲವು ಜಿಲ್ಲೆಗಳಲ್ಲಿ ಭೂ ಮಂಜೂರಾತಿ ಶುರು
- ಸರ್ಕಾರಿ, ಕಂದಾಯ ಭೂಮಿ ಬದಲಾವಣೆ
- ಖಬರಸ್ತಾನವಾಗಿ ಪರಿವರ್ತನೆಗೆ ಚಾಲನೆ
ಎಲ್ಲೆಲ್ಲಿ ಪ್ರಯತ್ನ?: ಬೆಂಗಳೂರು, ರಾಯಚೂರು, ಕಲಬುರಗಿ, ಹಾಸನ, ದ.ಕ, ಉಡುಪಿ ಸೇರಿ ಹಲವು ಜಿಲ್ಲೆ
ವಕ್ಪ್ ಆಸ್ತಿಗಳ ಕಾರ್ಯಪಡೆ ಪ್ರಕಾರ್ಯಗಳಲ್ಲಿ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯ ನಿರ್ಣಯ ಜಾರಿಗೆ ಕಂದಾಯ ಇಲಾಖೆ ಬದ್ಧ. ಸ್ಥಳೀಯವಾಗಿ ಲಭ್ಯ ಸರ್ಕಾರಿ ಭೂಮಿಯನ್ನು ಖಬರಸ್ತಾನಗಳಿಗೆ ಮಂಜೂರಾತಿ ಮಾಡಲು ಸಮಸ್ಯೆ ಇಲ್ಲ. ಭೂಮಿ ಲಭ್ಯವಿಲ್ಲದ ಕಡೆ ಇಲಾಖೆಯಿಂದ ಅಥವಾ ಸರ್ಕಾರದಿಂದ ಭೂಮಿ ಖರೀದಿಸಿ ಖಬರಸ್ಥಾನಗಳಿಗೆ ಕಾಯ್ದಿರಿಸುವ ಚಿಂತನೆ ಇದೆ.
| ಕೃಷ್ಣ ಬೈರೇಗೌಡ ಕಂದಾಯ ಸಚಿವರು
ರಾಜ್ಯದಲ್ಲಿ 328 ಖಬರಸ್ತಾನಗಳಿಗೆ ಲಭ್ಯವಿರುವ ಕಂದಾಯ ಭೂಮಿ, ಸರ್ಕಾರಿ ಜಮೀನನ್ನು ಮಂಜೂರಾತಿ ಮಾಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಕೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಕಂದಾಯ ಇಲಾಖೆಗೆ ಆದೇಶ ನೀಡಿದೆ. ಕಾರ್ಯ ಪ್ರಗತಿಯಲ್ಲಿದೆ.
| ಜಮೀರ್ ಅಹ್ಮದ್ ಖಾನ್ ವಕ್ಪ್ ಸಚಿವರು
ಸಾವಿರಾರು ದೇವಾಲಯಗಳ ಭೂಮಿ ಇನ್ನೂ ಕಂದಾಯ ಭೂಮಿ, ಸರ್ಕಾರಿ ಭೂಮಿಯಾಗಿಯೇ ಉಳಿದುಕೊಂಡಿವೆ. ಸರ್ಕಾರ ದೇವಾಲಯಗಳ ಹೆಸರಿಗೆ ಈ ಭೂಮಿಯನ್ನು ಮಂಜೂರು ಮಾಡಿಲ್ಲ. ಆದರೀಗ ಏಕಾಏಕಿ ಸರ್ಕಾರಿ ಭೂಮಿಯನ್ನು ಖಬರಸ್ತಾನಗಳ ಹೆಸರಲ್ಲಿ ಮಂಜೂರು ಮಾಡಲು ಸಿದ್ಧತೆ ನಡೆಸಿದೆ. ದೇವಾಲಯಗಳಿಗೆ ನೀಡದ ಸರ್ಕಾರಿ ಜಮೀನು ಖಬರಸ್ತಾನಗಳಿಗೆ ಯಾಕೆ? ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು.
| ಶರಣ್ ಪಂಪ್ವೆಲ್, ವಿಹಿಂಪ ಪ್ರಾಂತ ಸಹಕಾರ್ಯದರ್ಶಿ, ಮಂಗಳೂರು
ಲಖನೌ ತಂಡದಲ್ಲಿ ನಾನು…LSG ಮಾಲೀಕ ಸಂಜೀವ್ ಜೊತೆಗಿನ ವಿವಾದದ ಕುರಿತು ಮೌನಮುರಿದ KL Rahul
Orange ಜ್ಯೂಸ್ನಿಂದಾಗಿ ಬದಲಾಯ್ತು ಮಹಿಳೆಯ ಬದುಕು; ಲಾಟರಿಯಲ್ಲಿ ಗೆದ್ದಿದ್ದು ಕೋಟಿ ಕೋಟಿ