ಚೀನಾಗೆ ವಿಮಾನ ಸೇವೆ ಪುನಾರಂಭಿಸುವಂತೆ ಏರ್ ಇಂಡಿಯಾ, ಇಂಡಿಗೋಗೆ ಕೇಂದ್ರ ಸರ್ಕಾರ ಸೂಚನೆ: ವರದಿ! Air India and IndiGo

Air India, IndiGo
Published on

Air India and IndiGo : ಭಾರತ ಮತ್ತು ಚೀನಾ ನಡುವೆ ಮತ್ತೆ ಉತ್ತಮ ಸಂಬಂಧ ಚಿಗುರೊಡೆದಿದೆ. ಇದರ ಮುನ್ಸೂಚನೆಯಾಗಿ ಉಭಯ ದೇಶಗಳು ಮುಂದಿನ ತಿಂಗಳ ಆರಂಭದಲ್ಲಿ ನೇರ ವಿಮಾನ ಸೇವೆಗಳನ್ನು ಪುನಾರಂಭಿಸುವ ಸಾಧ್ಯತೆ ಇದೆ ಎಂದು ರಾಯಿಟರ್ಸ್ ಮಂಗಳವಾರ (ಆಗಸ್ಟ್​ 12) ವರದಿ ಮಾಡಿದೆ. ಈ ಒಂದು ಕ್ರಮವು ಎರಡೂ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸುವ ಸಂಕೇತವಾಗಿದೆ.

ವರದಿಯ ಪ್ರಕಾರ, ಏರ್ ಇಂಡಿಯಾ ಮತ್ತು ಇಂಡಿಗೊದಂತಹ ವಿಮಾನಯಾನ ಸಂಸ್ಥೆಗಳನ್ನು ಚೀನಾಕ್ಕೆ ವಿಮಾನಯಾನ ಸೇವೆಗಳನ್ನು ನಿರ್ವಹಿಸಲು ಸಿದ್ಧರಾಗಿರುವಂತೆ ಭಾರತ ಸರ್ಕಾರ ಕೇಳಿಕೊಂಡಿದೆ ಎಂದು ವರದಿಯಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಎರಡೂ ರಾಷ್ಟ್ರಗಳ ನಡುವಿನ ನೇರ ವಾಯು ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ.

2020ರ ಜೂನ್ ತಿಂಗಳಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೈನಿಕರ ನಡುವೆ ನಡೆದ ಮಾರಕ ಘರ್ಷಣೆಯ ನಂತರ ಭಾರತ-ಚೀನಾ ಸಂಬಂಧದಲ್ಲಿ ಭಾರೀ ಬಿರುಕು ಮೂಡಿತು. ಗಾಲ್ವಾನ್​ ಸಂಘರ್ಷವೂ ದಶಕಗಳಲ್ಲೇ ಎರಡೂ ದೇಶಗಳ ನಡುವಿನ ಅತ್ಯಂತ ಗಂಭೀರ ಮಿಲಿಟರಿ ಸಂಘರ್ಷ ಎನಿಸಿಕೊಂಡಿದೆ. ಈ ಘರ್ಷಣೆಯ ನಂತರ, ಎರಡೂ ರಾಷ್ಟ್ರಗಳು ವಾಸ್ತವ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಸೈನ್ಯದ ನಿಯೋಜನೆಯನ್ನು ಹೆಚ್ಚಿಸಿದವು ಮತ್ತು ಹಲವಾರು ಸುತ್ತಿನ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳಲ್ಲಿ ತೊಡಗಿದವು.

ಗಡಿಯುದ್ದಕ್ಕೂ ಹಲವಾರು ಪ್ರದೇಶಗಳು ವರ್ಷಗಳ ಕಾಲ ಬಗೆಹರಿಯದೆ ಉಳಿದಿದ್ದರೂ, ಕಳೆದ ವರ್ಷ ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಬಯಲು ಪ್ರದೇಶಗಳಲ್ಲಿ ತಮ್ಮ ತಮ್ಮ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುವುದರೊಂದಿಗೆ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿತು. ಪಡೆಗಳು, ಡೇರೆಗಳು ಮತ್ತು ತಾತ್ಕಾಲಿಕ ರಚನೆಗಳನ್ನು ಹಿಂತೆಗೆದುಕೊಳ್ಳುವುದನ್ನು ಒಳಗೊಂಡ ಪ್ರಕ್ರಿಯೆಯು 2020ರ ಅಕ್ಟೋಬರ್ 30 ರಂದು ಪೂರ್ಣಗೊಂಡಿತು.

ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಟಿಯಾಂಜಿನ್‌ಗೆ ಭೇಟಿ ನೀಡಲಿದ್ದಾರೆ. ಇದು 2019ರ ನಂತರ ಮೋದಿ ಅವರ ಮೊದಲ ಚೀನಾ ಪ್ರವಾಸವಾಗಿದೆ. ಪ್ರಧಾನಿ ಮೋದಿ ಭೇಟಿಯನ್ನು ಚೀನಾ ಆದರದಿಂದ ಸ್ವಾಗತಿಸಿದೆ. ಅಲ್ಲದೆ, ಶೃಂಗಸಭೆಯು "ಐಕಮತ್ಯ, ಸ್ನೇಹ ಮತ್ತು ಫಲಪ್ರದ ಫಲಿತಾಂಶಗಳ ಸಭೆ" ಎಂದು ನಂಬಿರುವುದಾಗಿ ಚೀನಾ ಹೇಳಿದೆ.

ಇತ್ತೀಚಿನ ತಿಂಗಳುಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಚೀನಾಗೆ ಭೇಟಿ ನೀಡಿದ್ದರು. ಚೀನಾದಲ್ಲಿ ನಡೆಸಿದ ಎಸ್‌ಸಿಒ ಸಂಬಂಧಿತ ಕಾರ್ಯಕ್ರಮಗಳ ಭಾಗವಾಗಿದ್ದರು. ಇದೀಗ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಉಭಯ ದೇಶಗಳ ನಡುವಿನ ಸಂಬಂಧ ಮತ್ತೆ ಮೊಳಕೆ ಒಡೆಯುವ ಲಕ್ಷಣಗಳು ಗೋಚರಿಸುತ್ತಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net