ಕೇವಲ ಎರಡೇ ಪಂದ್ಯವಾಡಿ ಏಷ್ಯಾ ಕಪ್​ ಗೆದ್ದಿತ್ತು ಟೀಮ್​ ಇಂಡಿಯಾ! ರೋಚಕ ಹಣಾಹಣಿ ಹೇಗಿತ್ತು ಗೊತ್ತಾ? Asia Cup

Asia Cup
Published on

Asia Cup : 2025ನೇ ಸಾಲಿನ ಏಷ್ಯಾ ಕಪ್ ಸೆಪ್ಟೆಂಬರ್ 9ರಿಂದ ಯುಎಇಯಲ್ಲಿ ಆರಂಭವಾಗಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಯುಎಇ, ಓಮನ್ ಮತ್ತು ಹಾಂಗ್ ಕಾಂಗ್ ಸೇರಿ ಒಟ್ಟು 8 ದೇಶಗಳು ಈ ಕಪ್‌ಗಾಗಿ ಸ್ಪರ್ಧಿಸಲಿವೆ. ಈ ಟೂರ್ನಿಯ ಫೈನಲ್​ ಪಂದ್ಯ ಸೆಪ್ಟೆಂಬರ್ 28 ರಂದು ನಡೆಯಲಿದೆ.

ಟೀಮ್ ಇಂಡಿಯಾ ಸೆಪ್ಟೆಂಬರ್ 10ರಂದು ಆತಿಥೇಯ ಯುಎಇ ವಿರುದ್ಧ ಟೂರ್ನಿಯ ಮೊದಲ ಪಂದ್ಯವನ್ನು ಆಡಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 14 ರಂದು ನಡೆಯಲಿದ್ದು, ಹಾಲಿ ಚಾಂಪಿಯನ್ ಆಗಿ ಟೂರ್ನಿಗೆ ಪ್ರವೇಶಿಸುತ್ತಿರುವ ಭಾರತ ಮತ್ತೆ ಈ ಟೂರ್ನಿಯನ್ನು ಗೆದ್ದು ಬೀಗುತ್ತದೆಯೇ? ಈ ಪ್ರಶ್ನೆಗೆ ಉತ್ತರ ಸಿಗಬೇಕೆಂದರೆ, ಟೂರ್ನಿ ಆರಂಭವಾಗಿ ಮುಗಿಯುವವರೆಗೆ ಕಾಯಬೇಕಾಗುತ್ತದೆ.

ಇಲ್ಲಿಯವರೆಗೆ, ಟೀಮ್​ ಇಂಡಿಯಾ 8 ಬಾರಿ ಏಷ್ಯಾಕಪ್ ಗೆದ್ದಿದೆ. 1984, 1988, 1990/91, 1995, 2010, 2016, 2018, ಮತ್ತು 2023 ರಲ್ಲಿ ಗೆದ್ದಿದೆ. ಭಾರತ ಬಳಿಕ ಶ್ರೀಲಂಕಾ ಅತಿ ಹೆಚ್ಚು ಬಾರಿ ಅಂದರೆ, ಆರು ಬಾರಿ ಏಷ್ಯಾ ಕಪ್​ನಲ್ಲಿ ಜಯಿಸಿದೆ. 1986, 1997, 2004, 2008, 2014 ಮತ್ತು 2022 ರಲ್ಲಿ ಲಂಕಾ ಗೆದ್ದಿದೆ. ಪಾಕಿಸ್ತಾನ ಎರಡು ಬಾರಿ (2000 ಮತ್ತು 2012 ರಲ್ಲಿ) ಮಾತ್ರ ಗೆದ್ದಿದೆ.

ಏಷ್ಯಾದ ದೇಶಗಳಲ್ಲಿ ಸೌಹಾರ್ದತೆಯನ್ನು ಉತ್ತೇಜಿಸಲು 1984ರಲ್ಲಿ ಒಂದು ಪಂದ್ಯಾವಳಿಯನ್ನು ರೂಪಿಸಲಾಯಿತು. ಆ ಪಂದ್ಯಾವಳಿಗೆ ಒಂದು ಹೆಸರಿಡಲಾಯಿತು. ಅದುವೇ ಏಷ್ಯಾ ಕಪ್. ಏಷ್ಯಾ ಕಪ್ ಟೂರ್ನಿಯ ಮೊದಲ ಆವೃತ್ತಿಯಲ್ಲಿ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಮಾತ್ರ ಭಾಗವಹಿಸಿದ್ದವು. ಈ ಪಂದ್ಯಾವಳಿಯನ್ನು ದುಬೈನ ಶಾರ್ಜಾದಲ್ಲಿ ರೌಂಡ್-ರಾಬಿನ್ ಸ್ವರೂಪದಲ್ಲಿ ನಡೆಸಲಾಯಿತು. 1983ರಲ್ಲಿ ಭಾರತ ತಂಡವನ್ನು ವಿಶ್ವಕಪ್‌ಗೆ ಮುನ್ನಡೆಸಿದ್ದ ಕಪಿಲ್ ದೇವ್ ಇಲ್ಲದೆ ಭಾರತ ಏಷ್ಯಾ ಕಪ್‌ಗೆ ಪ್ರವೇಶಿಸಿತು.

ಏಪ್ರಿಲ್ 6 ರಿಂದ 13 ರವರೆಗೆ ಪಂದ್ಯಾವಳಿ ನಡೆಯಿತು. ಭಾರತ ತಂಡವನ್ನು ಸುನಿಲ್ ಗವಾಸ್ಕರ್, ಪಾಕಿಸ್ತಾನವನ್ನು ಜಹೀರ್ ಅಬ್ಬಾಸ್ ಮತ್ತು ಶ್ರೀಲಂಕಾವನ್ನು ದಿಲೀಪ್ ಮೆಂಡಿಸ್ ಮುನ್ನಡೆಸಿದರು. ಏಪ್ರಿಲ್ 6 ರಂದು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಮೊದಲ ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 46 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಿತು. ಶ್ರೀಲಂಕಾ ತಂಡವು 188 ರನ್‌ಗಳ ಗುರಿಯನ್ನು 43.3 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ ಬೆನ್ನಟ್ಟಿತು.

ಎರಡನೇ ಪಂದ್ಯ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಿತು. ಈ ಪಂದ್ಯವನ್ನು ಭಾರತ 10 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಶ್ರೀಲಂಕಾವನ್ನು 41 ಓವರ್‌ಗಳಲ್ಲಿ 96 ರನ್‌ಗಳಿಗೆ ಟೀಮ್ ಇಂಡಿಯಾ ಆಲೌಟ್ ಮಾಡಿತು. ಭಾರತದ ಪರ ಚೇತನ್ ಶರ್ಮಾ ಮತ್ತು ಮದನ್ ಲಾಲ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು. 97 ರನ್‌ಗಳ ಸಣ್ಣ ಗುರಿಯನ್ನು ಬೆನ್ನಟ್ಟಿದ ಭಾರತ 21.4 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ ಗುರಿಯನ್ನು ತಲುಪಿತು.

ಮೂರನೇ ಪಂದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಿತು. ಈ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಿಗದಿತ 46 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 188 ರನ್‌ಗಳನ್ನು ಗಳಿಸಿತು. ನಂತರ, 189 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನವು 39.4 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ, ಭಾರತ 54 ರನ್‌ಗಳ ಅಂತರದಿಂದ ಗೆದ್ದಿತು. ಮೂರು ತಂಡಗಳನ್ನು ಒಳಗೊಂಡ ಈ ಟೂರ್ನಿಯಲ್ಲಿ ಭಾರತ ಎರಡು ಪಂದ್ಯಗಳನ್ನು ಗೆದ್ದು, ಏಷ್ಯಾ ಕಪ್‌ನ ಉದ್ಘಾಟನಾ ಆವೃತ್ತಿಯ ವಿಜೇತರಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net