

Gold Price: ಜಾಗತಿಕ ಮಾರುಕಟ್ಟೆಯಲ್ಲಿನ ದುರ್ಬಲ ಪ್ರವೃತ್ತಿಯ ಹಿನ್ನೆಲೆಯಲ್ಲಿ ಗುರುವಾರ (ಫೆ.27) ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 1,150 ರೂ.ನಷ್ಟು ಕುಸಿತ ಕಂಡಿದೆ. ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಮಂಗಳವಾರ 10 ಗ್ರಾಂಗೆ 89,350 ರೂ. ಇದ್ದದ್ದು ಗುರುವಾರ 88,200ಕ್ಕೆ ಇಳಿಯಿತು. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಮಂಗಳವಾರ 10 ಗ್ರಾಂಗೆ 88,950 ರೂ. ಇದ್ದದ್ದು ಗುರುವಾರ 87,800 ರೂ.ಗೆ ಇಳಿಯಿತು. ಗೋಲ್ಡ್ ಬೆಲೆಯಲ್ಲಿ ದಿಢೀರ್ ಕುಸಿತ ಖರೀದಿದಾರರಲ್ಲಿ ಖುಷಿಯೇನೋ ಮೂಡಿಸಿದೆ. ಆದ್ರೆ, ಈ ಬೆಳವಣಿಗೆ ಹಿಂದಿರುವ ಕಾರಣವೇನು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಅದರ ವಿವರ ಹೀಗಿದೆ.
ಇಂದು ಬೆಲೆಗಳು ಕುಸಿದಿದ್ದು, ಚಿನ್ನ ಖರೀದಿಸಲು ಬಯಸುವವರಿಗೆ ನಿರಾಳತೆಯನ್ನು ನೀಡಿದೆ. ಕಳೆದ ವರ್ಷ ನವೆಂಬರ್ನಿಂದ ಸೂಕ್ಷ್ಮವಾಗಿ ಗಮನಿಸಿ ನೋಡುವುದಾದರೆ, ಇಂದಿನ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ. ಕೇವಲ 300ರಿಂದ 400 ರೂ. ಇಳಿಕೆ ಕಾಣುತ್ತಿದ್ದ ಚಿನ್ನದ ದರ, ಇಷ್ಟು ತಿಂಗಳ ನಂತರ ಈಗ ಇಳಿಕೆಯಲ್ಲಿ 1000 ಗಡಿದಾಟಿದೆ. ಯುಎಸ್ ಡಾಲರ್ನ ಬಲವರ್ಧನೆಯು ಬುಲಿಯನ್ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಇದಲ್ಲದೆ, ಹೂಡಿಕೆದಾರರು ರಿಸರ್ವ್ ಹಣಕಾಸು ನೀತಿ ಮತ್ತು ಯುಎಸ್ ಹಣದುಬ್ಬರ ದತ್ತಾಂಶಕ್ಕಾಗಿ ಕಾಯುತ್ತಿರುವುದರಿಂದ ಚಿನ್ನದಲ್ಲಿ ನಿರೀಕ್ಷಿತ ಹೂಡಿಕೆಯಾಗಿಲ್ಲ ಎಂದು ವರದಿಯಾಗಿದೆ.
24 ಕ್ಯಾರೆಟ್ ಚಿನ್ನ: 8,684 ರೂ./ಗ್ರಾಂ
22 ಕ್ಯಾರೆಟ್ ಚಿನ್ನ: 7,960 ರೂ./ಗ್ರಾಂ
18 ಕ್ಯಾರೆಟ್ ಚಿನ್ನ: 6,513 ರೂ./ಗ್ರಾಂ
ಕಳೆದ ಎಂಟು ವಾರಗಳಿಂದ ಚಿನ್ನದ ದರ ಕ್ರಮೇಣವಾಗಿ ಏರಿಕೆಯಾಗುತ್ತಿದ್ದರೆ, ಈ ವಾರ ಶೇ.2.5ರಷ್ಟು ಕುಸಿತವನ್ನು ದಾಖಲಿಸಿದೆ. ಇದು ಖರೀದಿದಾರರಲ್ಲಿ ಖುಷಿ ಮೂಡಿಸಿದೆ. ಆದಾಗ್ಯೂ, ಫೆಬ್ರವರಿ ತಿಂಗಳಲ್ಲಿ ಇದು 2.2% ಹೆಚ್ಚಳ ಕಂಡಿದೆ.
ಯುಎಸ್ ಡಾಲರ್ ಬಲ: ಈ ವಾರ ಅಮೆರಿಕನ್ ಡಾಲರ್ ಸೂಚ್ಯಂಕ 0.7% ಏರಿಕೆಯಾಗಿ ಡಾಲರ್ ಅನ್ನು ಬಲಪಡಿಸಿತು. ಇದು ವಿದೇಶಿ ಹೂಡಿಕೆದಾರರು ಚಿನ್ನದತ್ತ ತಿರುಗಿ ನೋಡದಿರಲು ಕಾರಣವಾಗಿದೆ. ಚಿನ್ನ ಸುರಕ್ಷಿತ ಹೂಡಿಕೆಯಾಗಿದ್ದರೂ, ಹೂಡಿಕೆದಾರರು ಲಾಭ ಪಡೆಯುವುದರಿಂದ ಬೆಲೆಗಳು ಕುಸಿಯುತ್ತಿವೆ ಎಂದು ಮಾರುಕಟ್ಟೆ ತಂತ್ರಜ್ಞ ಯಿಪ್ ಜುನ್ ರೋಂಗ್ ತಿಳಿಸಿದ್ದಾರೆ.
ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಕ್ಸಿಕೊ ಮತ್ತು ಕೆನಡಾದಿಂದ ಆಮದು ಮಾಡಿಕೊಳ್ಳುವ ಮೇಲೆ 25% ಸುಂಕಗಳನ್ನು ಘೋಷಿಸಿದ್ದಾರೆ. ಜತೆಗೆ ಚೀನಾದ ಉತ್ಪನ್ನಗಳ ಮೇಲೆ ಹೆಚ್ಚುವರಿ ಶೇ.10ರಷ್ಟು ಸುಂಕವನ್ನು ವಿಧಿಸಿದ್ದಾರೆ. ಇದು ಮಾರ್ಚ್ 4ರಿಂದ ಜಾರಿಗೆ ಬರಲಿದೆ. ಡಾಲರ್ ಬಲಗೊಂಡಂತೆ ಇದು ಚಿನ್ನದ ಬೆಲೆಯ ಮೇಲೂ ಪರಿಣಾಮ ಬೀರಿದೆ. ಚಿನ್ನದ ದೀರ್ಘಾವಧಿಯ ಹೂಡಿಕೆದಾರರು ಫೆಡ್ನ ಹಣದುಬ್ಬರ ವರದಿಗಾಗಿ ಕಾಯುತ್ತಿರುವುದರಿಂದ ಚಿನ್ನದ ಬೆಲೆಗಳು ಕುಸಿತ ಕಂಡಿವೆ.
ಬಡ್ಡಿದರಗಳು ಪ್ರಸ್ತುತ ಶೇ.4.25ರಿಂದ 4.50 ರಷ್ಟರ ನಡುವೆ ಇರಬೇಕು ಎಂದು ಫಿಲಡೆಲ್ಫಿಯಾ ಫೆಡ್ ಅಧ್ಯಕ್ಷ ಪ್ಯಾಟ್ರಿಕ್ ಹಾರ್ಕರ್ ಸೂಚಿಸುವುದರಿಂದ ಚಿನ್ನದ ಬೆಲೆಗಳಿಗೆ ಬೆಂಬಲ ಕಡಿಮೆಯಾಗಿದೆ. ಬಲವಾದ ಡಾಲರ್ ಮತ್ತು ಸುಂಕಗಳ ಪ್ರಭಾವದಿಂದಾಗಿ ಚಿನ್ನದ ದರ ಕುಸಿದಿದೆ ಎಂದು ಮೆಹ್ತಾ ಈಕ್ವಿಟೀಸ್ ಕಮಾಡಿಟೀಸ್ನ ರಾಹುಲ್ ಕಲಾಂತ್ರಿ ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).