ಲೋಹಗಾಂವ ಗ್ರಾಮ ಪಂಚಾಯಿತಿಯ ಮಾದರಿ ನಡೆ, ಪ್ರಪ್ರಥಮ ಬಾರಿಗೆ ಸಿದ್ಧಗೊಂಡ ಆಯವ್ಯಯ ಮಂಡನೆ, ಮಹಿಳೆ-ಮಕ್ಕಳಿಗೆ ಬಂಪರ್ ಗಿಫ್ಟ್ !

LOHAGAM GP BUDGET
ವಿಜಯಪುರ ಜಿಲ್ಲೆಯ ಲೋಹಗಾಂವ ಗ್ರಾಮ ಪಂಚಾಯಿತಿಯಲ್ಲಿ 2024-25ನೇ ಸಾಲಿನ ಆಯವ್ಯಯ ಮಂಡಿಸಲಾಯಿತು. ಪಿಡಿಒ ಪದ್ಮಿನಿ ಬಿರಾದಾರ, ಸಿಬ್ಬಂದಿ ಕಾಸಪ್ಪ ತಳವಾರ, ರಾಜುಗೌಡ ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಪ್ರಪ್ರಥಮ ಬಾರಿಗೆ ವಾರ್ಷಿಕ ಆಯವ್ಯಯ ಸಿದ್ಧಪಡಿಸಿ ಗ್ರಾಮಸ್ಥರು ಹಾಗೂ ಸರ್ವಸದಸ್ಯರ ಸಮ್ಮುಖದಲ್ಲಿ ಮಂಡನೆ ಮಾಡುವ ಮೂಲಕ ಗ್ರಾಮ ಪಂಚಾಯಿತಿಯೊಂದು ಗಮನ ಸೆಳೆದಿದೆ.

ರಾಜ್ಯ, ಜಿಲ್ಲೆ, ನಗರ, ತಾಲೂಕು ಮತ್ತು ಪಟ್ಟಣ ಪಂಚಾಯಿತಿಗಳಿಗೆ ಮಾತ್ರ ಸೀಮಿತವಾಗಿದ್ದ ವಾರ್ಷಿಕ ಆಯವ್ಯಯ ಸಿದ್ಧಪಡಿಸುವಿಕೆ ಹಾಗೂ ಮಂಡನೆಯ ಪ್ರಕ್ರಿಯೆ ಇದೀಗ ಗ್ರಾಮ ಪಂಚಾಯಿತಿಗೂ ವಿಸ್ತರಿಸಿರುವುದು ವಿಶೇಷ. ಲೋಹಗಾವ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ 2024-25ನೇ ಸಾಲಿನ ಆಯವ್ಯಯ ಮಂಡಿಸಲಾಗಿದ್ದು, ಸದಸ್ಯರು ಹಾಗೂ ಗ್ರಾಮಸ್ಥರು ಹುಮ್ಮಸ್ಸಿನಿಂದಲೇ ಪಾಲ್ಗೊಂಡಿದ್ದರು.

ಸರ್ಕಾರದ ಯೋಜನೆಗಳ ಅನುಷ್ಟಾನ, ಸ್ಥಳೀಯವಾಗಿ ಲಭ್ಯ ಇರುವ ಅನುದಾನ ಹಾಗೂ ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ಗಮನದಲ್ಲಿರಿಸಿಕೊಂಡು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳು ವಾರ್ಷಿಕ ಆಯವ್ಯಯ ಸಿದ್ಧಪಡಿಸಿ ಮಂಡಿಸಬೇಕೆಂಬ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರದನ್ವಯ ಆಯವ್ಯಯ ಮಂಡನೆಗೊಂಡಿದ್ದು, ಇದೊಂದು ವಿನೂತನ ನಡೆಯಾಗಿದೆ.

ಸಚಿವರ ಆಶಯ ಈಡೇರಿಕೆ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಕಾಯ್ದೆ 1993 ರ ಪ್ರಕಾರ ಗ್ರಾಮ ಪಂಚಾಯಿತಿಗಳು ಪ್ರತಿ ವರ್ಷ ಗ್ರಾಮ ಪಂಚಾಯಿತಿಗಳಲ್ಲಿ ಪಡೆಯುವ ಅನುದಾನ ಮತ್ತು ಸಾರ್ವಜನಿಕರಿಂದ ವಿವಿಧ ತೆರಿಗೆಗಳ ಸಂಗ್ರಹದ ಆಧಾರದ ಮೇಲೆ ತಮ್ಮ ಬಜೆಟ್ ಅನ್ನು ಸಿದ್ಧಪಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆದಿದ್ದರು.

ಗ್ರಾಮ ಪಂಚಾಯಿತಿಗಳಲ್ಲಿ ತಮ್ಮಲ್ಲಿರುವ ಮೊತ್ತದ ವಿವರಗಳು ಮತ್ತು ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವ ಪ್ರಸ್ತಾವನೆಯನ್ನು ಬಜೆಟ್‌ನಲ್ಲಿ ನಮೂದಿಸಬೇಕು ಮತ್ತು ಅದು ಕಡ್ಡಾಯ. ಮಾರ್ಚ್ 10 ರ ಮೊದಲು ಬಜೆಟ್ ಸಿದ್ಧಪಡಿಸಿ ಅಂಗೀಕರಿಸಬೇಕು. ಬಜೆಟ್ ಮಂಡನೆಯನ್ನು ಸಂಬಂಧಪಟ್ಟ ತಾಲೂಕು ಪಂಚಾಯಿತಿಗಳಿಗೆ ಕಳುಹಿಸಬೇಕು ಎಂದು ಅವರು ಹೇಳಿದ್ದರು.

ಹಳ್ಳಿಗಳಲ್ಲಿರುವ ಜನರಿಗೆ ತಮ್ಮ ಗ್ರಾಮ ಪಂಚಾಯಿತಿಗಳು ಏನು ಮಾಡುತ್ತಿವೆ ಎಂದು ತಿಳಿಯುವ ಹಕ್ಕಿದೆ. ಬಜೆಟ್ ಅಂಗೀಕಾರವಾದರೆ, ಅದನ್ನು ನೋಟಿಸ್ ಬೋರ್ಡ್‌ನಲ್ಲಿ ಅಂಟಿಸಬೇಕು, ಇದರಿಂದ ಜನರು ತಮ್ಮ ಗ್ರಾಮ ಪಂಚಾಯಿತಿಗಳ ಚಟುವಟಿಕೆಗಳು ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದು. ಗ್ರಾಮ ಪಂಚಾಯಿತಿಗಳ ಆರ್ಥಿಕ ಸ್ಥಿತಿ ಮತ್ತು ಅಗತ್ಯಗಳ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಚಿತ್ರಣ ಸಿಗುತ್ತದೆ. ಹೆಚ್ಚಿನ ಅನುದಾನದ ಅಗತ್ಯವಿರುವಲ್ಲೆಲ್ಲಾ ಸರ್ಕಾರ ಖಂಡಿತವಾಗಿಯೂ ಸ್ಪಂದಿಸುತ್ತದೆ ಎಂದು ಸಚಿವರು ಹೇಳಿದ್ದರು. ಇದೀಗ ಸಚಿವರ ಆಶಯಕ್ಕೆ ಲೋಹಗಾಂವ ಪಂಚಾಯಿತಿ ನೀರೆರೆದಿದೆ.

ಮಹಿಳೆ-ಮಕ್ಕಳ ಕಲ್ಯಾಣಕ್ಕೆ ಆದ್ಯತೆ

ಒಟ್ಟು 8.5 ಕೋಟಿ ಗಾತ್ರ ಬಜೆಟ್‌ನಲ್ಲಿ ಮಹಿಳಾ ಸಶಕ್ತೀಕರಣಕ್ಕೆ ಶೇ.10, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶೇ. 10 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆರ್ಥಿಕ ಪ್ರಗತಿಗೆ ಶೇ.25, ನೀರು ನಿರ್ವಹಣೆಗೆ ಶೇ.20, ನೈರ್ಮಲೀಕರಣಕ್ಕೆ ಶೇ..10, ಅಂತರ್ಜಲ ಮಟ್ಟ ಹೆಚ್ಚಿಸಲು ಶೇ.10 ಮತ್ತು ಗ್ರಾಮ ಪಂಚಾಯಿತಿ ಆಡಳಿತ ಅಭಿವೃದ್ಧಿಗೆ ಶೇ1 ರಷ್ಟು ಅನುದಾನ ಮೀಸಲಿರಿಸಲಾಗಿದೆ. ಶೇ.100ರಷ್ಟು ತೆರಿಗೆ ಸಂಗ್ರಹಿಸಲು ಯೋಜನೆ ರೂಪಿಸಲಾಗಿದ್ದು, ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ ಅಭಿವೃದ್ಧಿ ಕುರಿತು ಅನುದಾನ ಮೀಸಲಿರಿಸಲು ಯೋಜಿಸಲಾಗಿದೆ.

ಸಭೆಯಲ್ಲಿದ್ದ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ರಾಜುಗೌಡ ಬಿರಾದಾರ, ಸಿಬ್ಬಂದಿ ಕಾಸಪ್ಪ ತಳವಾರ ಹಾಗೂ ಸರ್ವ ಸದಸ್ಯರು ಸಲಹೆ-ಸೂಚನೆ ನೀಡಿದ್ದು, ಆ ಪ್ರಕಾರ ಬಜೆಟ್ ಮಂಡನೆಗೊಂಡಿದ್ದಾಗಿ ಪಿಡಿಒ ಪದ್ಮಿನಿ ಬಿರಾದಾರ ಹೆಮ್ಮೆ ವ್ಯಕ್ತಪಡಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net