ಗೋಕರ್ಣದ ಬೀಚ್ ಕ್ರಿಕೆಟ್‌ಗೆ ಮನಸೋತ ಐಸಿಸಿ!

gokarna
Published on

ಬೆಂಗಳೂರು: ಉತ್ತರ ಕನ್ನಡದ ಸುಂದರ ಕರಾವಳಿ ತೀರ ಗೋಕರ್ಣ. ಶಿವನ ದೇವಾಲಯ ಹೊಂದಿರುವ ಈ ಸ್ಥಳ ಧಾರ್ಮಿಕ ಕೇಂದ್ರವೂ ಆಗಿದ್ದು, ಕಡಲ ತೀರದ ಸೌಂದರ್ಯದಿಂದಾಗಿ ಸಾಕಷ್ಟು ವಿದೇಶಿ ಪ್ರವಾಸಿಗರನ್ನೂ ಆಕರ್ಷಿಸಿದೆ. ಇದೀಗ ಇಲ್ಲಿನ ಬೀಚ್ ಕ್ರಿಕೆಟ್ ಆಟದ ವಿಹಂಗಮ ನೋಟಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯೂ (ಐಸಿಸಿ) ಮನಸೋತಿದೆ!

ಗೋಕರ್ಣ ಕಡಲತೀರದಲ್ಲಿ ಯುವಕರು ಕ್ರಿಕೆಟ್ ಆಡುತ್ತಿರುವ ಚಿತ್ರವನ್ನು ಐಸಿಸಿ ಸೋಮವಾರ ಟ್ವೀಟ್ ಮಾಡಿದೆ. ಈ ಸೊಗಸಾದ ದೃಶ್ಯಕ್ಕೆ ಸಾವಿರಾರು ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ. ಈ ಸುಂದರ ಸ್ಥಳ ಎಲ್ಲಿದೆ ಎಂದು ಪ್ರಶ್ನಿಸಿರುವ ದೇಶ-ವಿದೇಶದ ಕ್ರಿಕೆಟ್ ಪ್ರೇಮಿಗಳಿಗೆ, ಕನ್ನಡಿಗರು ಇದು ನಮ್ಮ ಕರ್ನಾಟಕದ ಕರಾವಳಿ ಎಂದು ಹೆಮ್ಮೆಯ ಉತ್ತರವನ್ನೂ ನೀಡಿದ್ದಾರೆ.

ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳು ಕೂಡ ಈ ಸ್ಥಳ ನಿಜಕ್ಕೂ ಸುಂದರವಾಗಿದೆ ಎಂದು ಕಮೆಂಟ್‌ಗಳನ್ನು ಹಾಕಿದ್ದಾರೆ. ‘ಬಾಲ್ ದೂರ ಹೋದರೂ ತೊಂದರೆ ಇಲ್ಲ, ಅಲೆಗಳೇ ಬಾಲ್‌ಬಾಯ್’ ಎಂದು ಕನ್ನಡದಲ್ಲೂ ಕಮೆಂಟ್‌ಗಳು ಬಂದಿವೆ. ಕಳೆದ 3 ತಿಂಗಳಿನಿಂದ ಕ್ರಿಕೆಟ್ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿರುವ ನಡುವೆ ಐಸಿಸಿ, ವಿಶ್ವದ ಸುಂದರ ಕ್ರಿಕೆಟ್ ತಾಣಗಳ ಚಿತ್ರಗಳನ್ನು ಟ್ವೀಟಿಸಿ, ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯುತ್ತಾ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net