

ಬೆಂಗಳೂರು: ಹೊಸ ಅಧ್ಯಾಯವನ್ನು ಸತತ ಸೋಲುಗಳ ಮೂಲಕ ಶುರು ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 17ನೇ ಆವೃತ್ತಿಯಲ್ಲಿ ಆಡಿರುವ 6 ಪಂದ್ಯಗಳ ಪೈಕಿ 5ರಲ್ಲಿ ಸೋತು 1ರಲ್ಲಿ ಮಾತ್ರ ಗೆದ್ದಿದೆ. ಈಗಾಗಲೇ ಸತತ ಸೋಲುಗಳಿಂದ ಕಂಗೇಟ್ಟಿರುವ ಆರ್ಸಿಬಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಪ್ರಮುಖ ಆಟಗಾರನೋರ್ವ ಗಾಯಕ್ಕೆ ತುತ್ತಾಗಿದ್ದು, ಮುಂದಿನ ಪಂದ್ಯಗಳಿಗೆ ಇವರ ಲಭ್ಯತೆ ಅನುಮಾನವೆನಿಸಿದೆ.
ಈಗಾಗಲೇ ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್ಸಿಬಿ ತಂಡಕ್ಕೆ ಈ ಆಟಗಾರನ ಗಾಯದ ಸಮಸ್ಯೆ ಪ್ರಮುಖ ತಲೆನೋವಾಗಿ ಪರಿಣಮಿಸಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಈ ಆಟಗಾರ ಗಾತಯಕ್ಕೆ ತುತ್ತಾಗಿದ್ದರು ಎಂದು ವರದಿಯಾಗಿದೆ. ಅದರಂತೆ ಆರ್ಸಿಬಿ ತಮಡದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಗಾಯಕ್ಕೆ ತುತ್ತಾಗಿದ್ದು, ಮುಂದಿನ ಪಂದ್ಯಗಳಿಗೆ ಅವರ ಲಭ್ಯತೆ ಅನುಮಾನ ಎಂದು ಹೇಳಲಾಗಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಮ್ಯಾಕ್ಸ್ವೆಲ್ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಹೀಗಾಗಿ ಅವರು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ. ಅದರಂತೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕ್ಯಾಮರೋನ್ ಗ್ರೀನ್ ಅಥವಾ ಲಾಕಿ ಫರ್ಗ್ಯೂಸನ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಹಾಲಿ ಆವೃತ್ತಿಯಲ್ಲಿ ಆರ್ಸಿಬಿ ಪರ ಗ್ಲೆನ್ ಮ್ಯಾಕ್ಸ್ವೆಲ್ ನಿರೀಕ್ಷಿತ ಪ್ರದರ್ಶನ ಕಂಡು ಬಂದಿಲ್ಲ. ಕಳೆದ ಆವೃತ್ತಿಗಳಿಗೆ ಹೋಲಿಸಿದರೆ ಮ್ಯಾಕ್ಸ್ವೆಲ್ ಅವರ ಬ್ಯಾಟ್ ಈ ಬಾರಿ ಹೆಚ್ಚು ಸದ್ದು ಮಾಡಿಲ್ಲ. ಹಾಲಿ ಟೂರ್ನಿಯಲ್ಲಿ ಆಡಿರುವ 06 ಪಂದ್ಯಗಳಿಂದ ಮ್ಯಾಕ್ಸ್ವೆಲ್ ಅವರ ಬ್ಯಾಟಿನಿಂದ ಹರಿದು ಬಂದಿರುವುದು ಬರಿ 32ರನ್ಗಳು ಮಾತ್ರ ಈ ಆರು ಇನಿಂಗ್ಸ್ಗಳಲ್ಲಿ ಅವರು ಕಲೆಹಾಕಿದ ಗರಿಷ್ಠ ಸ್ಕೋರ್ 28 ರನ್ಗಳು. ಇನ್ನುಳಿದ 5 ಇನಿಂಗ್ಸ್ಗಳಲ್ಲಿ ಕ್ರಮವಾಗಿ 0,1,0,3,0 ಗೆ ವಿಕೆಟ್ ಒಪ್ಪಿಸಿದ್ದಾರೆ.
ಮುಂಬರುವ ಪಂದ್ಯಗಳಲ್ಲಿ ಮ್ಯಾಕ್ಸ್ವೆಲ್ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಭಾವಿಸಲಾಗಿತ್ತಾದರು ಆರ್ಸಿಬಿಗೆ ಮ್ಯಾಕ್ಸ್ವೆಲ್ ಅವರ ಗಾಯವು ಹೊಸ ಚಿಂತೆಯನ್ನು ಉಂಟು ಮಾಡಿದೆ. ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ತವರು ನೆಲದಲ್ಲಿ ಆಡಲಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಲಯಕ್ಕೆ ಮರಳಲಿದೆಯಾ ಎಂದು ಕಾದು ನೋಡಬೇಕಿದೆ.