

ಹೈದರಾಬಾದ್: ಆತ್ಮರಕ್ಷಣೆಗಾಗಿ ಹುಡುಗಿಯರು ಯಾರನ್ನು ಬೇಕಾದರೂ ಕೊಲ್ಲಬಹುದು ಎಂದು ಹೈದರಾಬಾದ್ನ ಮೆಟ್ರೋಪಾಲಿಟನ್ ಕಾನೂನು ಸೇವೆಗಳ ಪ್ರಾಧಿಕಾರ (ಎಂಎಲ್ಎಸ್ಎ)ದ ಕಾರ್ಯದರ್ಶಿ ಎಂ. ರಾಧಾಕೃಷ್ಣ ಚೌಹಾನ್ ಹೇಳಿದ್ದಾರೆ.
ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಹಿನ್ನೆಲೆಯಲ್ಲಿ ಗೊಲ್ಕೊಂಡದ ಬಾಲಕಿಯರ ಸರ್ಕಾರಿ ಶಾಲೆಯಲ್ಲಿ ಎಂಎಲ್ಎಸ್ಎ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ರಾಧಾಕೃಷ್ಣ ಅವರು ಮಾತನಾಡಿದರು. ಹೊರಗಡೆ ಹೋಗುವಾಗ ಜತೆಯಲ್ಲಿ ಪೆಪ್ಪರ್ ಸ್ಪ್ರೇ ತೆಗೆದುಕೊಂಡು ಹೋಗಲು ಹೆಣ್ಣು ಮಕ್ಕಳಿಗೆ ಸಲಹೆ ನೀಡಿ, ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಆತ್ಮರಕ್ಷಣೆಗಾಗಿ ಕೊಲ್ಲುವುದು ಅಪರಾಧವಲ್ಲ ಎಂದು ತಿಳಿಸಿದರು.
ಹುಡುಗಿಯರು ತಮ್ಮ ತಾವು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಆತ್ಮರಕ್ಷಣೆಗಾಗಿ ಬೇರೊಬ್ಬರನ್ನು ಕೊಲ್ಲಲು ಕಾನೂನು ಅನುಮತಿ ನೀಡಿದೆ. ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ನಿಮ್ಮ ರಕ್ಷಣೆಯನ್ನು ನೀವೇ ಮಾಡಿಕೊಳ್ಳಿ ಎಂದು ಧೈರ್ಯ ತುಂಬಿದ ರಾಧಾಕೃಷ್ಣ, ಮಹಿಳೆಯರಿಗಾಗಿ ಇರುವ ಅನೇಕ ಕಾನೂನುಗಳ ಬಗ್ಗೆ ಅರಿವು ಮೂಡಿಸಿದರು.
ವಿವಿಧ ಕ್ಷೇತ್ರದ ಶ್ರೇಷ್ಠ ವ್ಯಕ್ತಿಗಳನ್ನು ಅನುಸರಿಸಿ, ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. ಸರ್ಕಾರಿ ಶಾಲೆಯ ಮಕ್ಕಳು ಯಾವುದೇ ಖಾಸಗಿ ಶಾಲೆಯ ಮಕ್ಕಳಿಗಿಂತ ಕಡಿಮೆಯೇನಲ್ಲ ಎಂದು ಹೇಳಿದರು. (ಏಜೆನ್ಸೀಸ್)