

ಕ್ಯಾಲಿಫೋರ್ನಿಯಾ: ನಾವು ಸಣ್ಣ, ದಪ್ಪ, ಉದ್ದ, ಕುಳ್ಳ.. ಹೇಗೇ ಇದ್ದರೂ ಸಮಾಜಕ್ಕೆ ಅದು ಸಮಸ್ಯೆಯಾಗಿಯೇ ಕಾಣಿಸಿಕೊಳ್ಳುತ್ತದೆ. ಅದರಂತೆ ಗರ್ಲ್ಫ್ರೆಂಡ್ ದಪ್ಪ ಇದ್ದಾಳೆ ಎನ್ನುವ ಕಾರಣಕ್ಕೆ ಆಕೆಯ ಬಾಯ್ಫ್ರೆಂಡ್ ಹೇಳದೇ ಕೇಳದೆ ಬಿಟ್ಟು ಹೋಗಿದ್ದಾನೆ. ಹಾಗೆ ಹೋದ ಬಾಯ್ಫ್ರೆಂಡ್ಗೆ ಆಕೆ ಬುದ್ಧಿ ಕಲಿಸಿ ಬಗೆ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರ.
ಅಮೆರಿಕದ ಕ್ಯಾಲಿಫೋರ್ನಿಯಾದ ಸಮಂತಗೆ 12 ವರ್ಷ ವಯಸ್ಸಿದ್ದಾಗಿನಿಂದ ತೂಕ ಹೆಚ್ಚಾಗಿದೆ. ಆ ವಯಸ್ಸಿನಲ್ಲೇ ಡಯೆಟ್ ಆರಂಭಿಸಿದ್ದಳಾದರೂ ಯಾವುದೇ ಪ್ರಯೋಜನ ಆಗಿಲ್ಲ. ಯೌವನಕ್ಕೆ ಬರುವಷ್ಟರಲ್ಲಿ ಬರೋಬ್ಬರಿ 165 ಕೆ.ಜಿ ತೂಗುತ್ತಿದ್ದಳಂತೆ. ತೂಕ ಇಳಿಸುವುದಕ್ಕೆ ಸಾಕಷ್ಟು ಪ್ರಯತ್ನ ಪಟ್ಟಿದ್ದಳಾದರೂ ಯಾವುದೂ ಯಶಸ್ವಿಯಾಗಿರಲಿಲ್ಲ. ಈ ಮಧ್ಯೆ ಆಕೆಗೆ ಯುವಕನೊಬ್ಬನ ಜತೆ ಪ್ರೀತಿ ಶುರುವಾಗಿದೆ. ಎರಡು ವರ್ಷ ಪ್ರೀತಿ ಸಾಗಿದೆ. ಎರಡು ವರ್ಷವಾದರೂ ಆತನ ಸ್ನೇಹಿತರು ಅಥವಾ ಕುಟುಂಬವನ್ನು ಆತ ಪರಿಚಯ ಮಾಡಿಕೊಟ್ಟಿರಲಿಲ್ಲವಂತೆ. ಕಾರಣ ಕೇಳಿದಾಗಲೆಲ್ಲ ಏನಾದರೂ ನೆಪ ಹೇಳಿ ಸುಮ್ಮನಾಗುತ್ತಿದ್ದನಂತೆ.
ಹೀಗಿದ್ದ ಪ್ರೀತಿ ಒಂದು ದಿನ ಇದ್ದಕ್ಕಿದ್ದಂತೆ ಮಾಯವಾಗಿದೆ. ಯುವಕ, ಸಮಂತಗೆ ಏನೂ ಕಾರಣ ಹೇಳದೆಯೇ ಬಿಟ್ಟು ಹೋಗಿದ್ದಾನೆ. ಆತನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬೇರೆ ಹುಡುಗಿಯೊಂದಿಗಿನ ಫೋಟೋ ನೋಡಿದ ಮೇಲೆಯೇ ಸಮಂತಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ.
ಇದರಿಂದ ನೊಂದ ಸಮಂತ ಸಣ್ಣಗಾಗುವ ನಿರ್ಧಾರ ಮಾಡಿದ್ದಾಳೆ. ವೈದ್ಯರ ಸಲಹೆಯ ಮೇರೆಗೆ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡು ಬರೋಬ್ಬರಿ 90 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಈಗಿನ ಸಮಂತಗೂ ಹಿಂದಿನ ಸಮಂತಗೂ ಹೋಲಿಕೆ ಮಾಡಲಾಗದಷ್ಟು ಬದಲಾವಣೆಯಾಗಿದೆ. ಇದೀಗ ಸುಂದರ ಸಮಂತಗೆ ಮದುವೆಯಾಗಿದ್ದು ಒಂದು ಮಗುವೂ ಇದೆಯಂತೆ. (ಏಜೆನ್ಸೀಸ್)