ಕಾಸರಗೋಡು: ಬಾಲಕನೊಬ್ಬ ತನ್ನ ಸೈಕಲ್ ಕಳವಾಗಿರುವ ಕುರಿತು ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿದರೂ ಪತ್ತೆಯಾಗಲಿಲ್ಲ. ಈ ಕಾರಣದಿಂದ ಸ್ವತಃ ಪೋಲೀಸರೇ ಬಾಲಕನಿಗೆ ಸೈಕಲ್ ಖರೀದಿಸಿ ಕೊಟ್ಟ ಘಟನೆ ಹೊಸದುರ್ಗದಲ್ಲಿ ನಡೆದಿದೆ.
ಕಡುಬಡತನದ ಕುಟುಂಬ
ಕಾಞಂಗಾಡು ಕಲ್ಲೂರಾವಿ ನಿವಾಸಿ ಶ್ರೀಜಾ ಎಂಬವರ ಪುತ್ರ, ಕಾಞಂಗಾಡು ಸೌತ್‌ಶಾಲೆಯ 8ನೇ ತರಗತಿ ವಿದ್ಯಾರ್ಥಿ ಅಭಿಜಿತ್‌ನ ಸೈಕಲ್ ವಾರದ ಹಿಂದೆ ಕಳವಾಗಿತ್ತು. ಕುಟುಂಬ ಕಡುಬಡತನದಲ್ಲಿದ್ದು, ಮತ್ತೊಂದು ಸೈಕಲ್ ಖರೀದಿಸಲಾಗದೆ ಠಾಣೆ ಮೆಟ್ಟಿಲೇರಿದ್ದಾರೆ.
ವಿಶೇಷ ತೀರ್ಮಾನ ಕೈಗೊಂಡ ಪೊಲೀಸರು
ಠಾಣಾಧಿಕಾರಿ ಎಂ.ಪಿ.ಆಸಾದ್ ಸೈಕಲ್ ಪತ್ತೆಹಚ್ಚಿ ನೀಡುವುದಾಗಿ ಭರವಸೆ ನೀಡಿದ್ದರು. ವಾರದವರೆಗೆ ಅಭಿಜಿತ್ ಸೈಕಲ್ ಪತ್ತೆಗೆ ಪೊಲೀಸರು ಹುಡುಕಾಡಿದ್ದು, ಪತ್ತೆಯಾಗಿರಲಿಲ್ಲ. ಜತೆಗೆ ಬಾಲಕನ ದುಗುಡ ಕಂಡು ಪೊಲೀಸರೇ ವಿಶೇಷ ತೀರ್ಮಾನ ಕೈಗೊಂಡಿದ್ದು, ಹೊಸ ಸೈಕಲ್ ಖರೀದಿಸಿ ನೀಡಲು ಮುಂದಾಗಿದ್ದಾರೆ.
ಹೊಸ ಸೈಕಲ್ ಸ್ವೀಕರಿಸಿದ ಸಂತಸದಲ್ಲಿ ಬಾಲಕ
ಠಾಣಾಧಿಕಾರಿ ಎಂ.ಪಿ. ಆಸಾದ್ ನೇತೃತ್ವದಲ್ಲಿ ಪೊಲೀಸರು ಹಣ ಸಂಗ್ರಹಿಸಿ, ಬಾಲಕನಿಗೆ ಹೊಸ ಸೈಕಲ್ ಖರೀದಿಸಿ ನೀಡಿದ್ದಾರೆ. ತಾಯಿ ಶ್ರೀಜಾ ಜತೆ ಠಾಣೆಗೆ ತೆರಳಿದ ಬಾಲಕ ಅಭಿಜಿತ್ ಸಂತೋಷದಿಂದ ಹೊಸ ಸೈಕಲ್ ಸ್ವೀಕರಿಸಿದ್ದಾನೆ. ಬಳಿಕ ಪೊಲೀಸರು ಅಭಿಜಿತ್‌ನನ್ನು ಬೀಳ್ಕೊಟ್ಟರು.