

ವಿಜಯವಾಣಿ ಸುದ್ದಿಜಾಲ ಬೈಂದೂರು
ನಾವುಂದ ಗ್ರಾಮದ ಕುದ್ರುಕೋಡು ಪ್ರದೇಶದ ಯುವಕರಿಬ್ಬರು ವಿನೂತನ ಮಾದರಿಯಲ್ಲಿ ಅಣಬೆ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ. ಲಂಬೋದರ ಶೆಟ್ಟಿ, ರಾಘವೇಂದ್ರ ಪೂಜಾರಿ ಅಣಬೆ ಕೃಷಿಯಲ್ಲಿ ಸ್ಫೂರ್ತಿದಾಯಕವಾಗಿ ಹೆಜ್ಜೆ ಇಡುವ ಮೂಲಕ ಮಾದರಿಯಾಗಿದ್ದು, ಕೃಷಿಕ ನಾಗೇಂದ್ರ ದೇವಾಡಿಗ ಅವರಿಗೆ ಸಾಥ್ ನೀಡಿದ್ದಾರೆ.
ಈ ಯುವಕರ ಫಾರ್ಮ್ನಲ್ಲಿ ಉತ್ಕೃಷ್ಟ ಗುಣಮಟ್ಟದ ಸುಮಾರು ಐದು ಸಾವಿರ ಯೂನಿಟ್ ಅಣಬೆ ಬೆಳೆಯುತ್ತಿದ್ದಾರೆ. ಅಣಬೆ ಪ್ರಿಯರು ಅವರ ಫಾರ್ಮ್ ಹೌಸ್ಗೆ ಹೋಗಿ ನೇರವಾಗಿ ಖರೀದಿಸಲು ಅವಕಾಶವಿದೆ. ಉಪ್ಪಿನಕಾಯಿ, ಅಣಬೆ ಪೌಡರ್ ಸಹಿತ ಹಲವು ರೀತಿಯ ಖಾದ್ಯಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಔಷಧೀಯ ಗುಣಗಳನ್ನು ಹೊಂದಿರುವ ಅಣಬೆ ಪೌಷ್ಟಿಕಯುಕ್ತ ಆಹಾರವೂ ಹೌದು.
ಗ್ರಾಮೀಣ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ದೊರೆಯುವ ಪ್ರಕೃತಿ ಸಹಜ ಅಣಬೆಗಳು ವಿಶೇಷ ಬೇಡಿಕೆ ಹೊಂದಿವೆ. ಅವು ಮಳೆಗಾಲದಲ್ಲಿ ಮಾತ್ರ ದೊರೆಯುತ್ತದೆ. ಬಹಳಷ್ಟು ಮಹಾತ್ವಾಕಾಂಕ್ಷೆ ಇಟ್ಟುಕೊಂಡು ಅಣಬೆ ಕೃಷಿ ಮಾಡಲಾಗಿದ್ದು, ಕೃಷಿ ಜತೆಗೆ ಉದ್ಯೋಗ ಸೃಷ್ಟಿ ಮಾಡುವುದು ನಮ್ಮ ಗುರಿಯಾಗಿದೆ ಎನ್ನುತ್ತಾರೆ ಮಶ್ರೂಂ ಪ್ಲಾಂಟ್ನ ಲಂಬೋದರ ಶೆಟ್ಟಿ.
ಉದ್ಯೋಗ ದೃಷ್ಟಿಯಿಂದ ಮತ್ತು ಕೃಷಿ ಮೇಲಿನ ಆಸಕ್ತಿಯಿಂದ ಗ್ರಾಮೀಣ ಪ್ರದೇಶದಲ್ಲಿ ವಿನೂತನ ಮಾದರಿಯಲ್ಲಿ ಅಣಬೆ ಕೃಷಿ ಮಾಡಲಾಗಿದೆ. ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಅಣಬೆಗೆ ಜಾಗತಿಕವಾಗಿ ಮನ್ನಣೆ ಇರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ.
ರಾಘವೇಂದ್ರ ಪೂಜಾರಿ, ಅಣಬೆ ಕೃಷಿಕ