

ಬೆಂಗಳೂರು: 'ಗರುಡ ಗಮನ, ವೃಷಭ ವಾಹನ'. ಇದು ರಾಜ್ ಬಿ. ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಇಬ್ಬರೂ ನಾಯಕರಾಗಿ ಅಭಿನಯಿಸಿರುವ ಹೊಸ ಸಿನಿಮಾದ ಶೀರ್ಷಿಕೆ. ರಿಷಬ್ ಶೆಟ್ಟಿ ಹರಿ ಹಾಗೂ ರಾಜ್ ಶೆಟ್ಟಿ ಶಿವ ಎಂಬ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಸಿನಿಮಾ ಇದೇ ನ. 19ರಂದು ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಮಂಗಳೂರು ಅಂಡರ್ವರ್ಲ್ಡ್ನಲ್ಲಿ ಶೆಟ್ಟಿ ಲೋಗ್
ರಾಜ್ ಬಿ. ಶೆಟ್ಟಿ ನಿರ್ದೇಶನದ ಈ ಸಿನಿಮಾಗೆ ನಟ ರಕ್ಷಿತ್ ಶೆಟ್ಟಿ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಸಿನಿಮಾ ಬಿಡುಗಡೆ ಕುರಿತು ಮಾಹಿತಿ ನೀಡಲು ರಕ್ಷಿತ್ ಶೆಟ್ಟಿ ಹಾಗೂ ರಾಜ್ ಶೆಟ್ಟಿ ಇಂದು ಲೈವ್ ಬಂದು ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸಿನಿಮಾ ಬಗ್ಗೆ ಬಹಳಷ್ಟು ವಿಷಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ಗರುಡ ಗಮನ ವೃಷಭ ವಾಹನ’ಕ್ಕೆ ನಟ ರಕ್ಷಿತ್ ಶೆಟ್ಟಿ ಸಾಥ್
ಸಿನಿಮಾ ಕುರಿತು ವಿವರ ನೀಡುವಾಗ ವೀಕ್ಷಕರೊಬ್ಬರು ಹೀರೋಯಿನ್ ಬಗ್ಗೆ ತಿಳಿಸಿ ಎಂದು ಕೇಳಿದಾಗ, ಚಿತ್ರದಲ್ಲಿ ಹೀರೋಯಿನ್ ಇಲ್ಲ ಎಂಬುದನ್ನು ನಿರ್ದೇಶಕ ರಾಜ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಈ ಚಿತ್ರದಲ್ಲಿ ಹೀರೋಯಿನ್ ಇಲ್ಲ. ಕಥೆ ಬರೆಯುವಾಗ ಹೀರೋಯಿನ್ ಪಾತ್ರ ಇರಬೇಕು ಅಂತ ಅಂದುಕೊಂಡಿದ್ದೆ. ಆದರೆ ಬಳಿಕ ನನಗೆ ಇದರಲ್ಲಿ ಒಂದು ಮಹಿಳಾ ಪಾತ್ರವನ್ನು ತುರುಕುತ್ತಿದ್ದೇನೆ ಅನಿಸಿತು. ಅಲ್ಲದೆ ಬರೆಯುವ ಓಘದಲ್ಲಿ ಕಥಾನಾಯಕಿಯ ಪಾತ್ರ ಬರಲಿಲ್ಲ ಎಂದು ರಾಜ್ ಶೆಟ್ಟಿ ತಿಳಿಸಿದ್ದಾರೆ. ಹೀರೋಯಿನ್ ಇಲ್ಲದಿದ್ದರೂ ಆ ಕೆಮಿಸ್ಟ್ರಿ ಇರಲಿದೆ ಎನ್ನುವ ಮೂಲಕ ಅವರು ಕುತೂಹಲವನ್ನೂ ಮೂಡಿಸಿದ್ದಾರೆ.