

ನವದೆಹಲಿ: ಪ್ರಸಕ್ತ ಐಸಿಸಿ ಟಿ20 ವಿಶ್ವಕಪ್ 2024ರ ಪಂದ್ಯಾವಳಿಗಳು ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿದ್ದು, ನಿನ್ನೆ (ಜೂ.23) ನಡೆದ ಸೂಪರ್ 8 ಕ್ಲ್ಯಾಶ್ನಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ 50 ರನ್ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತ ಬಂದಿರುವ ಭಾರತ ತಂಡದ ಆಟಗಾರರಿಗೆ ಕ್ರಿಕೆಟ್ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ, ಪ್ರಶಂಸೆಗಳು ವ್ಯಕ್ತವಾಗುತ್ತಿವೆ.
ಟಾಸ್ ಸೋತ ಭಾರತ ಮೊದಲು ಬ್ಯಾಟ್ ಮಾಡುವ ಮೂಲಕ 20 ಓವರ್‌ಗಳಲ್ಲಿ 196 ರನ್ಗಳನ್ನು ಬಾಂಗ್ಲಾದೇಶಕ್ಕೆ ಗುರಿ ನೀಡಿತು. ಇನ್ನು ಈ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ, 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಶಕ್ತವಾಯಿತು. 50 ರನ್ಗಳ ಭರ್ಜರಿ ಗೆಲುವು ದಾಖಲಿಸಿದ ಭಾರತ ಇದೀಗ ಸೆಮಿಫೈನಲ್‌ಗೆ ಎಂಟ್ರಿ ಕೊಡಲು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಇನ್ನು ಶೀಘ್ರವೇ ಟೀಂ ಇಂಡಿಯಾದ ಹೆಡ್ ಕೋಚ್ ಆಗಿ ಅಧಿಕಾರ ಸ್ವೀಕರಿಸಲಿರುವ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್, ಪ್ರಸ್ತುತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಉಪನಾಯಕನಾಗಿ ಹಾಗೂ ಆಲ್ರೌಂಡರ್ ಆಗಿ ಕೊಡುಗೆ ನೀಡುತ್ತಿರುವ ಹಾರ್ದಿಕ್ ಪಾಂಡ್ಯಗೆ ಕಿವಿಮಾತು ಮತ್ತು ಒಂದಷ್ಟು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.
"ಮೊದಲು ಮತ್ತು ಅತೀ ಮುಖ್ಯವಾಗಿ ನಾಯಕ ರೋಹಿತ್ ಶರ್ಮಾ ಮತ್ತು ತಂಡದ ಇತರೆ ಕಿರಿಯ ಸದಸ್ಯರನ್ನು ಒಂದೇ ರೀತಿಯಲ್ಲಿ ನೋಡಿಕೊಳ್ಳಿ. ಇದು ಅತ್ಯಂತ ಕಠಿಣ ಕೆಲಸ. ಉಪನಾಯಕ ಅಂದಮೇಲೆ ನಿಮಗೆ, ನಿಮ್ಮದೇ ಆದ ಕೆಲವು ಜವಾಬ್ದಾರಿಗಳು ಇರುತ್ತದೆ. ಅದನ್ನು ಪಾಲಿಸಬೇಕು. ನೀವು ಲೀಡರ್ ಎಂದರೆ, ಆ ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಪ್ರತಿಯೊಬ್ಬರಿಗೂ ನಾಯಕ ಎಂದೇ ಅರ್ಥ" ಎಂದು ಗಂಭೀರ್ ಹೇಳಿದ್ದಾರೆ,(ಏಜೆನ್ಸೀಸ್).