ಗ್ಯಾಂಗ್​ರೇಪ್​ ಕೇಸ್ : ಯುವತಿ-ಆರೋಪಿಗಳನ್ನು ಭಾರತಕ್ಕೆ ತಂದವ ಬಾಂಗ್ಲಾ ಪೊಲೀಸ್ ವಶಕ್ಕೆ; ಯುವತಿ ಹೇಳಿಕೆ ದಾಖಲು

bangla
Published on

ಬೆಂಗಳೂರು: ಬಾಂಗ್ಲಾ ಯುವತಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಅಕ್ರಮವಾಗಿ ಭಾರತಕ್ಕೆ ಕರೆತಂದು ವೇಶ್ಯಾವಾಟಿಕೆ ನಡೆಸಲು ವ್ಯವಸ್ಥೆ ಮಾಡಿಕೊಟ್ಟ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಕೊಟ್ಟ ಸುಳಿವಿನ ಆಧಾರದ ಮೇಲೆ ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ. ಬಾಂಗ್ಲಾ ಮೂಲದ ರಫೀಕ್ ಬಂಧಿತ.

ಬಾಂಗ್ಲಾ ಮೂಲದ ಯುವತಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದ ಆರೋಪಿಗಳನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ತಮ್ಮನ್ನು ಬಾಂಗ್ಲಾ ದೇಶದ ರಫೀಕ್ ಎಂಬಾತ ಅಕ್ರಮವಾಗಿ ಬೆಂಗಳೂರಿಗೆ ಕರೆ ತಂದಿದ್ದ ಎಂಬ ಸಂಗತಿಯನ್ನು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಈ ಮಾಹಿತಿ ಆಧರಿಸಿ ರಫೀಕ್ ಹಿನ್ನೆಲೆ ಕೆದಕಿದ ಪೊಲೀಸರಿಗೆ ಆತನ ಹಲವು ರಹಸ್ಯಗಳು ಗೊತ್ತಾಗಿದೆ.

ಆತ ಹಲವಾರು ಬಾಂಗ್ಲಾ ಪ್ರಜೆಗಳನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮೂಲಕ ಬೆಂಗಳೂರಿಗೆ ಕರೆ ತಂದು ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಲು ಪ್ರಚೋದಿಸುತ್ತಿದ್ದ. ವೇಶ್ಯಾವಟಿಕೆ ದಂಧೆಯ ಡೀಲ್ ಕುದುರಿಸಿ ಲಕ್ಷಾಂತರ ರೂ. ಸಂಪಾದಿಸಿದ್ದ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನೂ ಆತನೇ ನಗರಕ್ಕೆ ಕರೆತಂದಿದ್ದ. ಬೆಂಗಳೂರಿನಲ್ಲಿರುವ ಕೆಲ ಬಾಂಗ್ಲಾ ವಲಸಿಗರಿಗೆ ಆಧಾರ್ ಕಾರ್ಡ್ ಮಾಡಿಸಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದ. ಪದೇ-ಪದೇ ಬಾಂಗ್ಲಾದಿಂದ ಬೆಂಗಳೂರಿಗೆ ಬಂದು ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೂ ಮುನ್ನ ನಗರಕ್ಕೆ ಬಂದು ಮತ್ತೆ ಬಾಂಗ್ಲಾಕ್ಕೆ ವಾಪಸಾಗಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಬಾಂಗ್ಲಾ ಪೊಲೀಸ್ ಬಲೆಗೆ ಆರೋಪಿ: ನಗರ ಪೂರ್ವ ವಿಭಾಗದ ಪೊಲೀಸರು ರಫೀಕ್‌ಗೆ ಎಲ್ಲೆಡೆ ಶೋಧ ನಡೆಸಿ ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಆತ ಬಾಂಗ್ಲಾದೇಶದಲ್ಲಿ ಇರುವ ಸುಳಿವು ಸಿಕ್ಕಿತ್ತು. ಕೂಡಲೇ ಬೆಂಗಳೂರು ಪೊಲೀಸರು ಬಾಂಗ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ರಫೀಕ್‌ನ್ನು ಪತ್ತೆಹಚ್ಚಿದ ಬಾಂಗ್ಲಾ ಪೊಲೀಸರು ಆತನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದುವರೆಗೂ ಅಕ್ರಮವಾಗಿ ಎಷ್ಟು ಬಾಂಗ್ಲಾ ನಿವಾಸಿಗಳನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿದ್ದಾನೆ ಎಂಬ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯದಲ್ಲೇ ಹೆಚ್ಚಿನ ವಿಚಾರಣೆಗಾಗಿ ರಫೀಕ್‌ನನ್ನು ನಗರಕ್ಕೆ ಕರೆ ತರಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಹೇಳಿಕೆ : ಅತ್ಯಾಚಾರಕ್ಕೆ ಒಳಗಾದ ಯುವತಿಯು ಸಿಆರ್‌ಪಿಸಿ ಸೆಕ್ಷನ್ 164 ಪ್ರಕಾರ ತನ್ನ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ನೀಡಿದ್ದಾಳೆ. ಆರೋಪಿಗಳನ್ನು ಗುರುತಿಸಿರುವ ಸಂತ್ರಸ್ತೆ, ಪ್ರಕರಣದ ಬಗ್ಗೆ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾಳೆ ಎನ್ನಲಾಗಿದೆ. ಇತ್ತ ಆರೋಪಿಗಳ ವಿಚಾರಣೆ ಮುಂದುವರೆಸಿರುವ ಪೊಲೀಸರು ತನಿಖೆ ನಡೆಸಿ ತಿಂಗಳೊಳಗೆ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ದತೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net