

ಬೆಂಗಳೂರು: ಗಣೇಶ್ ಇತ್ತೀಚೆಗೆ ಒಂದಿಷ್ಟು ಹುಡುಗ-ಹುಡುಗಿಯರನ್ನು ಕೂಡಿಸಿಕೊಂಡು ರೈಡ್ ಮಾಡುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಗಣೇಶ್ ರೈಡಿಂಗ್ ಹೋಗಿದ್ದು ಯಾಕೆ? ಅವರ ಜತೆಗೆ ಇದ್ದವರು ಯಾರು? ಎಂದು ತಲೆ ಕೆರೆಡುಕೊಂಡವರಿಗೆ ಕೊನೆಗೂ ಉತ್ತರ ಸಿಕ್ಕಿದೆ.
ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಗಣೇಶ್, ನಾಯಕಿಯರಾದ ಮೇಘಾ ಶೆಟ್ಟಿ ಮತ್ತು ರಚನಾ ಇಂದರ್ ಅಭಿಮಾನಿಗಳ ಜೊತೆ ಬೈಕ್ನಲ್ಲಿ ರೈಡಿಂಗ್ ಹೋಗುವ ಮೂಲಕ ಸಿನಿಮಾದ ಪ್ರಚಾರ ಮಾಡಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಭಿಮಾನಿಗಳ ಜತೆಗೆ ರೈಡ್ ಮಾಡುವ ಮೂಲಕ ಚಿತ್ರದ ಬಗ್ಗೆ ಜಾಗೃತಿ ಮೂಡಿಸಿದರು. ಪ್ರಚಾರದ ನೆಪದಲ್ಲಿ ತಮ್ಮ ಇಷ್ಟದ ನಟ-ನಟಿಯರ ಜತೆಗೆ ಬೈಕ್ ರೈಡ್ ಮಾಡಿ ಅಭಿಮಾನಿಗಳು ಕೂಡ ಫುಲ್ ಖುಷಿಯಾದರು.
ಎಂ. ರಾಮಗೋಪಾಲ್ ನಿರ್ಮಿಸಿ, ಮಹೇಶ್ ಗೌಡ ನಿರ್ದೇಶನ ಮಾಡಿರುವ 'ತ್ರಿಬಲ್ ರೈಡಿಂಗ್' ಚಿತ್ರವು ಈ ವಾರ ರಾಜ್ಯಾದ್ಯಂತ ಸುಮಾರು 180ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆ ಆಗುತ್ತಿದೆ. ಗಣೇಶ್ಗೆ ನಾಯಕಿಯಾಗಿ ಅದಿತಿ ಪ್ರಭುದೇವ, ಮೇಘಾ ಶೆಟ್ಟಿ ಮತ್ತು ರಚನಾ ಇಂದರ್ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಸಾಧು ಕೋಕಿಲ, ರಂಗಾಯಣ ರಘು, ಶೋಭರಾಜ್ ಮುಂತಾದ ಕಲಾವಿದರು ನಟಿಸಿರುವ ಈ ಚಿತ್ರಕ್ಕೆ ಸಾಯಿಕಾರ್ತಿಕ್ ಸಂಗೀತ ಸಂಯೋಜಿಸಿದ್ದಾರೆ.