ಜಗತ್ತಿನಾದ್ಯಂತ 400 ಕೋಟಿ ರೂ. ಗಳಿಸಿದ 'ಕಾಂತಾರ'!

Kantara 15
Published on

ಬೆಂಗಳೂರು: ರಿಷಭ್​ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರದ ಯಶಸ್ವಿ ಪ್ರದರ್ಶನ ಮುಂದುವರೆದಿದೆ. ಕಳೆದ ವಾರವಷ್ಟೇ ಚಿತ್ರದ ಕನ್ನಡ ಅವತರಣಿಕೆಯು 300 ಚಿತ್ರಮಂದಿರಗಳಲ್ಲಿ 50 ದಿನಗ ಯಶಸ್ವಿ ಪ್ರದರ್ಶನ ಕಂಡಿತ್ತು. ಸದ್ಯದಲ್ಲೇ ಈ ಚಿತ್ರದ ಬೇರೆ ಅವತರಣಿಕೆಗಳು ಸಹ 50 ದಿನದತ್ತ ದಾಪುಗಾಲು ಹಾಕಿದ್ದು, ಚಿತ್ರ ಒಟ್ಟಾರೆ ಜಗತ್ತಿನಾದ್ಯಂತ 400 ಕೋಟಿ ರೂ ಕ್ಲಬ್​ ಸೇರಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, 'ಕಾಂತಾರ' ಚಿತ್ರವು ಜಗತ್ತಿನಾದ್ಯಂತ 400 ಕೋಟಿ ರೂ. ಗಳಿಕೆ ಮಾಡಿದ್ದು, ಈ ಪೈಕಿ ಕರ್ನಾಟಕದಿಂದಲೇ 168.5 ಕೋಟಿ ಸಂಗ್ರಹಿಸಿದೆಯಂತೆ. ಕೇರಳದಿಂದ 19.2 ಕೋಟಿ, ಹಿಂದಿಯಿಂದ 90 ಕೋಟಿ, ತೆಲುಗಿನಿಂದ 60 ಕೋಟಿ ಹಾಗೂ ತಮಿಳಿನಿಂದ 12.70 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಅಲ್ಲಿಂದಲೇ 44 ಕೋಟಿ ರೂ. ಗಳಿಕೆಯಾಗಿದೆ ಎಂಬ ಸುದ್ದಿ ಇದೆ.

'ಕಾಂತಾರ' ಚಿತ್ರವು ಸೆ. 30ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದಾಗಿ, ಕನ್ನಡ ಚಿತ್ರವು ಬಿಡುಗಡೆಯಾದ ಎರಡು ವಾರಗಳ ಅಂತರದಲ್ಲಿ ತೆಲುಗು, ತಮಿಳು ಮತ್ತು ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಡಬ್​ ಮಾಡಲಾಯಿತು.

'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು, ರಿಷಭ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್​, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net