

| ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು
ನೀವು ‘ವಿಜಯಾನಂದ’ ಚಿತ್ರತಂಡ ಸೇರಿಕೊಂಡಿದ್ದು ಹೇಗೆ?
-ನಾನೇ ಅವರ ತಂದೆಯ ಪಾತ್ರದಲ್ಲಿ ನಟಿಸಬೇಕು ಅಂತ ಡಾ. ವಿಜಯ ಸಂಕೇಶ್ವರ ಅವರು ಆನಂದ ಸಂಕೇಶ್ವರ ಬಳಿ ಹೇಳಿದ್ದರಂತೆ. ಅವರು ಅಷ್ಟು ಬಯಸಿದಾಗ ಮಾಡೋಣ ಅಂತ ನನಗೂ ಅನ್ನಿಸಿತು. ಚಿತ್ರ ಡಾ. ವಿಜಯ ಸಂಕೇಶ್ವರ ಅವರ ಜೀವನದ ಕುರಿತು ಇದ್ದರೂ ಕೂಡ, ಅವರ ತಂದೆಯವರು ಅವರ ಮೇಲೆ ಬಾಲ್ಯದಲ್ಲಿ ಎಷ್ಟು ಪರಿಣಾಮ ಬೀರಿದ್ದರು ಎಂಬುದನ್ನೂ ನೋಡಬಹುದು.
ಬಿ.ಜಿ. ಸಂಕೇಶ್ವರ ಅವರ ಪಾತ್ರದಲ್ಲಿ ನಟಿಸಿದ ಅನುಭವ ಹೇಗಿತ್ತು?
-ಬಿ.ಜಿ ಸಂಕೇಶ್ವರ ಅವರ ಜೀವನ ಹೇಗಿತ್ತು? ಅವರ ಮೌಲ್ಯಗಳೇನು? ಅವರ ಜೀವನದ ಕ್ರಮವೇನು? ಯಾವ ತತ್ವಸಿದ್ಧಾಂತವನ್ನು ಒಪ್ಪಿದ್ದರು ಅವರು? ಇಂತಹ ಹಲವು ವಿಚಾರಗಳು ಚಿತ್ರದಲ್ಲಿವೆ. ಅವರು ಧಾರ್ವಿುಕ ಹಿನ್ನೆಲೆ ಉಳ್ಳವರಾಗಿದ್ದರು. ವೀರಶೈವ ಲಿಂಗಾಯತ ಧರ್ಮದ ಹಿರಿಮೆ, ಅದು ಕರ್ನಾಟಕದ ಹೆಮ್ಮೆ, ಅದನ್ನು ಈ ಚಿತ್ರದ ಮೂಲಕ, ನನ್ನ ಪಾತ್ರದ ಮೂಲಕ ತೋರಿಸುವ ಅವಕಾಶ ಸಿಕ್ಕಿತು.
ನಿರ್ದೇಶಕಿ ರಿಷಿಕಾ ಶರ್ಮಾ ಜತೆ ಕೆಲಸ ಮಾಡಿದ ಅನುಭವ?
-ನಿರ್ದೇಶಕಿ ರಿಷಿಕಾ ಶರ್ಮಾ ಚೆನ್ನಾಗಿ ಚಿತ್ರಕಥೆ ಮಾಡಿಕೊಂಡಿದ್ದರು. ಅಚ್ಚುಕಟ್ಟಾಗಿ ನಿರ್ದೇಶಿಸಿದರು. ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಒಳ್ಳೆಯ ಅನುಭವ ನೀಡಿತು.
ಹುಬ್ಬಳ್ಳಿಯಲ್ಲಿ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಿರಿ...
-ಮೊದಲು ಚಿತ್ರತಂಡದವರು ಚಿತ್ರೀಕರಣ ಬೇರೆ ಕಡೆ ಮಾಡಬೇಕು ಅಂತ ಯೋಚಿಸಿದ್ದರು. ನಾನು ಅವರನ್ನು ಹುಬ್ಬಳ್ಳಿಯಲ್ಲೇ ಚಿತ್ರೀಕರಣ ಆಗಬೇಕು ಅಂತ ಒಪ್ಪಿಸಿದೆ. ಸ್ಟುಡಿಯೋದಲ್ಲೋ ಅಥವಾ ಬೇರೆ ಲೊಕೇಷನ್ನಲ್ಲೋ ಚಿತ್ರೀಕರಣ ಮಾಡಿದರೆ ನೈಜತೆಗೆ ಹತ್ತಿರವಾದ ವಾತಾವರಣ, ಪರಿಸರ ಸಿಗುವುದಿಲ್ಲ. ಹೀಗಾಗಿ ಹುಬ್ಬಳ್ಳಿಯಲ್ಲೇ ಚಿತ್ರೀಕರಣ ಮಾಡಿ ಎಂದಾಗ ಅವರೂ ಸಂತೋಷದಿಂದ ಒಪ್ಪಿದರು.
ಚಿತ್ರೀಕರಣದ ದಿನಗಳು ಹೇಗಿದ್ದವು?
-ಹುಬ್ಬಳ್ಳಿಯಲ್ಲಿ ಇದ್ದಾಗ ಒಮ್ಮೆ ಡಾ. ವಿಜಯ ಸಂಕೇಶ್ವರ, ಡಾ. ಆನಂದ ಸಂಕೇಶ್ವರ ಜತೆಗೆ ಇಡೀ ಸಂಕೇಶ್ವರ ಕುಟುಂಬವನ್ನು ಭೇಟಿ ಮಾಡಿದ್ದೆ. ಅವರನ್ನೆಲ್ಲ ಭೇಟಿ ಮಾಡಿದ್ದು ತುಂಬ ಖುಷಿ ನೀಡಿತು.