ಅನೂಪ್‌ಗೆ ಸಕಲ ಸರ್ಕಾರಿ ಗೌರವ

Anoop poojary
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಜಮ್ಮು ಕಾಶ್ಮೀರದ ಪೂಂಛ್‌ನಲ್ಲಿ ಯೋಧರು ಪ್ರಯಾಣಿಸುತ್ತಿದ್ದ ವಾಹನ ಕಮರಿಗೆ ಉರುಳಿ ಹುತಾತ್ಮರಾದ ಕುಂದಾಪುರ ಬೀಜಾಡಿಯ ಅನೂಪ್ ಪೂಜಾರಿ(31) ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಬೀಜಾಡಿ ಗ್ರಾಮದ ಕಡಲತೀರದಲ್ಲಿ ಗುರುವಾರ ನಡೆಯಿತು.

ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ ಮಮತಾದೇವಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ಧಲಿಂಗಪ್ಪ, ಸಹಾಯಕ ಕಮಿಷನರ್ ಮಹೇಶ್ಚಂದ್ರ, ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ, ಕುಂದಾಪುರ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಸಹಿತ ವಿವಿಧ ಇಲಾಖೆ ಅಧಿಕಾರಿಗಳು, ಭಾರತೀಯ ಭೂಸೇನೆ ಅಧಿಕಾರಿಗಳು ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ, ಶಾಸಕರಾದ ಸುನೀಲ್ ಕುವಾರ್, ಗುರುರಾಜ್ ಶೆಟ್ಟಿ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕೆ.ರಘುಪತಿ ಭಟ್, ಬೀಜಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ ಪೂಜಾರಿ, ಬಿಲ್ಲವ ಸಂಘ ಅಧ್ಯಕ್ಷ ಅಶೋಕ ಪೂಜಾರಿ, ರೈಲ್ವೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ ಪುತ್ರನ್, ಮೀನುಗಾರರ ಸಹಕಾರಿ ಸಂಘ ಅಧ್ಯಕ್ಷ ಮಂಜುನಾಥ ಕುಂದರ್, ಸತ್ಯಜಿತ್ ಸುರತ್ಕಲ್, ಮಾಜಿ ಸೈನಿಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಹಸ್ರ ಸಂಖ್ಯೆಯಲ್ಲಿ ಜಾತಿ ಮತ ಭೇದವಿಲ್ಲದೆ ಸಾಗಿಬಂದ ಜನರು ಅನೂಪ್ ಪೂಜಾರಿ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

ಸ್ಮಾರಕ ನಿರ್ಮಾಣಕ್ಕೆ ನಿರ್ಧಾರ

ಅನೂಪ್ ಪೂಜಾರಿ ಸ್ಮರಣಾರ್ಥ ಬೀಜಾಡಿ ಕಡಲತೀರದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಬೀಜಾಡಿ ಗ್ರಾಪಂ ಹಾಗೂ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಬೀಜಾಡಿ ನಿವಾಸಿ ಚಂದು ಪೂಜಾರ್ತಿ ಮತ್ತು ನಾರಾಯಣ ಪೂಜಾರಿ ದಂಪತಿ ಏಕೈಕ ಪುತ್ರನಾಗಿದ್ದ ಅನೂಪ್ ಬೀಜಾಡಿ ಪಡು ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತೀಯ ಸೇನೆಗೆ ಸೇರಿದ ನಂತರ 13 ವರ್ಷ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿದ್ದು, ಮುಂದಿನ ನಾಲ್ಕು ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಊರಿಗೆ ಬಂದು ನೆಲೆಸುವ ಯೋಚನೆ ಹೊಂದಿದ್ದರು.

ಐವರು ಯೋಧರನ್ನು ನಾವು ಕಳೆದುಕೊಂಡಿದ್ದೇವೆ. ಹುತಾತ್ಮರಾದ ಕುಂದಾಪುರದ ಅನೂಪ್ ಪೂಜಾರಿ ಅವರಿಗೆ ಜಿಲ್ಲಾಡಳಿತದಿಂದ ಸರ್ಕಾರದ ಸಕಲ ಗೌರವ ಕೊಟ್ಟಿದ್ದೇವೆ. ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದು, ಕುಟುಂಬ ಸದಸ್ಯರಿಗೆ ದುಃಖ ಸಹಿಸುವ ಶಕ್ತಿ ಕೊಡಲಿ. -ಮಮತಾದೇವಿ ಅಪರ ಜಿಲ್ಲಾಧಿಕಾರಿ ಉಡುಪಿ

ಕೋಟದಲ್ಲಿ ಪುಷ್ಪ ನಮನ

ವೀರಯೋಧ ಅನೂಪ್ ಪೂಜಾರಿ ಅವರಿಗೆ ಕೋಟ ಅಮೃತೇಶ್ವರಿ ಸರ್ಕಲ್ ಬಳಿ ಸಾರ್ವಜನಿಕರು ಪುಷ್ಪನಮನ ಸಲ್ಲಿಸಿದರು. ಸಾಸ್ತಾನದ ಮಾಬುಕಳ, ಸಾಸ್ತಾನ ಬಸ್ ನಿಲ್ದಾಣ, ಸಾಲಿಗ್ರಾಮ, ಕೋಟ ಹೈಸ್ಕೂಲ್ ಸರ್ಕಲ್, ತೆಕ್ಕಟ್ಟೆ ಬಸ್ ನಿಲ್ದಾಣ ಬಳಿ ಸಾರ್ವಜನಿಕರು ಗೌರವ ಸಲ್ಲಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್ ಕುಮಾರ್, ಜಿಪಂ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ರಾಘವೇಂದ್ರ ಕಾಂಚನ್, ಸತೀಶ್ ಕುಂದರ್, ಕೋಟ ಗ್ರಾಪಂ ಉಪಾಧ್ಯಕ್ಷ ಪಾಂಡು ಪೂಜಾರಿ, ಸ್ಥಳೀಯಾಡಳಿತ ಪ್ರತಿನಿಧಿಗಳು, ಅಮೃತೇಶ್ವರಿ ದೇಗುಲ ಅಧ್ಯಕ್ಷ ಆನಂದ್ ಸಿ.ಕುಂದರ್, ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಮೊದಲಾದವರು ನಮನ ಸಲ್ಲಿಸಿದರು.

ಬ್ರಹ್ಮಾವರದ ಬಿಜೆಪಿ ಕಚೇರಿ ಎದುರುಗಡೆ ಗೌರವ ನಮನ

ಹುತಾತ್ಮ ಯೋಧ ಅನೂಪ್ ಪೂಜಾರಿ ಪಾರ್ಥಿವ ಶರೀರಕ್ಕೆ ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರದ ಬಿಜೆಪಿ ಕಚೇರಿ ಎದುರುಗಡೆ ಗೌರವ ನಮನ ಸಲ್ಲಿಸಲಾಯಿತು. ತೆಕ್ಕಟ್ಟೆಯ ಸೇನಾ ಕುಟುಂಬದ ನಿವೃತ್ತ ಸೇನಾನಿ ರವಿ ಶೆಟ್ಟಿ ನೇತೃತ್ವದಲ್ಲಿ ಸೇನಾ ವಾಹನದಲ್ಲಿ ಸಕಲ ಸೇನಾ ಗೌರವದೊಂದಿಗೆ ಬ್ರಹ್ಮಾವರಕ್ಕೆ ಆಗಮಿಸಿದ ಪಾರ್ಥಿವ ಶರೀರಕ್ಕೆ ನಾಗರಿಕರು ಪುಷ್ಪನಮನ ಸಲ್ಲಿಸಿದರು. ಬೈಕಾಡಿ ರವಿ ಪೂಜಾರಿ, ಸಚಿನ್ ಮುಂದಾಳತ್ವದಲ್ಲಿ ವ್ಯವಸ್ಥೆಗೊಳಿಸಿದ್ದು, ಬ್ರಹ್ಮಾವರದ ಪ್ರಮುಖರಾದ ಬಿರ್ತಿ ರಾಜೇಶ್ ಶೆಟ್ಟಿ,ನಿತ್ಯಾನಂದ ಬಿ.ಆರ್., ರಾಜು ಕುಲಾಲ್, ದೇವಾನಂದ ನಾಯಕ್, ಬ್ರಹ್ಮಾವರ ಭಾಗದ ನಿವೃತ್ತ ಸೇನಾನಿಗಳಾದ ಭಾಸ್ಕರ್ ಶೇರಿಗಾರ್, ಸುರೇಶ್ ರಾವ್, ಅಶೋಕ್ ನಾಯರಿ, ಕಲ್ಲಪ್ಪ ಮೊದಲಾದವರಿದ್ದರು.

ಅಶ್ರುತರ್ಪಣ

ಕೋಟ ವಿವೇಕ ವಿದ್ಯಾ ಸಂಸ್ಥೆ ಹಳೇ ವಿದ್ಯಾರ್ಥಿ ಅನೂಪ್ ಪೂಜಾರಿ ಬೀಜಾಡಿ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುವ ಸಂದರ್ಭ ವಿವೇಕ ವಿದ್ಯಾ ಸಂಸ್ಥೆಯ ಮುಂಭಾಗದಲ್ಲಿ ನಮನ ಸಲ್ಲಿಸಲಾಯಿತು. ಪ್ರಾಂಶುಪಾಲ ಜಗದೀಶ ನಾವಡ, ಸಂಸ್ಥೆ ಮುಖ್ಯಸ್ಥ ಜಗದೀಶ ಹೊಳ್ಳ, ಪ್ರೀತಿ ರೇಖಾ, ವೆಂಕಟೇಶ ಉಡುಪ ಉಪಸ್ಥಿತರಿದ್ದರು.

ವೀರ ಯೋಧನಿಗೆ ಅಶ್ರುತರ್ಪಣೆ

ದೇಶ ಕಾಯುಕ ಕಾಯಕದಲ್ಲಿ ಹುತಾತ್ಮರಾಗುವ ಕ್ಷಣ ಮರೆಯಲಾಗದ ಪುಟಗಳಲ್ಲಿ ಸೇರಿಕೊಂಡಿದೆ ಎಂದು ಭಾರತೀಯ ದೂರಸಂಪರ್ಕ ವಿಭಾಗದ ನಿವೃತ್ತ ಡಿಜಿಎಂ ಮಣೂರು ವಿಷ್ಣುಮೂರ್ತಿ ಮಯ್ಯ ಅಭಿಪ್ರಾಯಪಟ್ಟರು.

ಹುತಾತ್ಮ ಯೋಧ ಅನೂಪ್ ಪೂಜಾರಿಗೆ ಕೋಟದ ಪಂಚವರ್ಣ ಮಹಿಳಾ ಮಂಡಲ, ಮಣೂರು ಸ್ನೇಹಕೂಟ ನೇತೃತ್ವದಲ್ಲಿ ಅಶ್ರುತರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಣೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಚ್.ಕುಂದರ್, ಸ್ನೇಹಕೋಟದ ಸಂಚಾಲಕಿ ಭಾರತಿ ವಿ.ಮಯ್ಯ, ಸಾಂಸ್ಕೃತಿಕ ಚಿಂತಕಿ ರಶ್ಮಿರಾಜ್ ಕುಂದಾಪುರ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್, ನೂತನ ಅಧ್ಯಕ್ಷ ಮನೋಹರ್ ಪೂಜಾರಿ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ಮಣೂರು ಮಹಾಲಿಂಗೇಶ್ವರ ಸಭಾಭವನ ಅಧ್ಯಕ್ಷ ರಾಜೇಂದ್ರ ಉರಾಳ ಮತ್ತಿತರರು ಉಪಸ್ಥಿತರಿದ್ದರು. ಸುಜಾತಾ ಬಾಯರಿ ಕಾರ‌್ಯಕ್ರಮ ವಂದಿಸಿದರು. ಪಂಚವರ್ಣದ ರವೀಂದ್ರ ಕೋಟ ನಿರ್ವಹಿಸಿದರು.

ಅನೂಪ್ ಶ್ರದ್ಧಾಂಜಲಿ

ಹುತಾತ್ಮ ಯೋಧ ಅನೂಪ್ ಪೂಜಾರಿ ಅಶ್ರುತರ್ಪಣಾ ಕಾರ್ಯಕ್ರಮದಲ್ಲಿ ಮಣೂರು ವಿಷ್ಣುಮೂರ್ತಿ ಮಯ್ಯ ಮಾತನಾಡಿದರು. ಸತೀಶ್ ಎಚ್.ಕುಂದರ್, ಭಾರತಿ ವಿ.ಮಯ್ಯ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net