

ಬೆಂಗಳೂರು: ಇತ್ತೀಚೆಗೆ ಕೆ.ಆರ್.ಸರ್ಕಲ್ ಬಳಿ ಮಳೆ ನೀರಿನಲ್ಲಿ ಕ್ಯಾಬ್ ಮುಳುಗಿ ಮಹಿಳಾ ಟೆಕ್ಕಿ ಭಾನುರೇಖಾ ಮೃತಪಟ್ಟ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ನಗರ ಸಂಚಾರ ಪೊಲೀಸರು ಬಿಬಿಎಂಪಿ ಅಥವಾ ಸ್ಥಳೀಯ ಸಂಸ್ಥೆಗಳಿಗಾಗಿ ಕಾಯದೆ, ತಾವೇ ತುರ್ತಾಗಿ ಸ್ಪಂದಿಸಲು ಅಗತ್ಯ ಸಲಕರಣೆಗಳನ್ನು ಖರೀದಿ ಮಾಡಿದ್ದಾರೆ.
ಈಗಾಗಲೇ ಮಳೆಗಾಲ ಆರಂಭವಾಗಿದ್ದು, ನಗರದ ಕೆಲವಡೆ ಅದರಿಂದ ಹಾನಿ ಉಂಟಾಗಿದೆ. ರಸ್ತೆಯಲ್ಲಿ ನೀರು ಹೊಳೆಯಂತೆ ಹರಿದಿದೆ. ಹಲವೆಡೆ ಮರಗಳು ಹಾಗೂ ಮರದ ಟೊಂಗೆಗಳು ಬಿದ್ದಿವೆ. ಈ ಮಧ್ಯೆ ಜೂನ್‌ನಿಂದ ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗಲಿದ್ದು, ಮತ್ತೊಮ್ಮೆ ನಗರವು ಭಾರಿ ಮಳೆಗೆ ಮುಳುಗುವ ಭೀತಿಯಲ್ಲಿದೆ. ಇದರಿಂದ ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ಉಂಟಾಗಲಿದೆ. ಹಾಗೆಯೇ ಮರದ ಕೊಂಬೆಗಳು ಬೀಳುವ ಸಾಧ್ಯತೆಯಿದೆ. ಅದರಿಂದ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ, ದಟ್ಟಣೆ ನಿಯಂತ್ರಿಸಲು ಹಾಗೂ ಮಳೆ ಹಾನಿಗೆ ಸ್ಪಂದಿಸಲು ಪೊಲೀಸರು ಅಗತ್ಯ ಸಲಕರಣೆ ಖರೀದಿಸಿದ್ದು, ಬಳಕೆ ಮಾಡಲು ಮುಂದಾಗಿದ್ದಾರೆ.
ಸಂಚಾರ ಪೊಲೀಸ್ ಠಾಣಾಧಿಕಾರಿಗಳ ಜೀಪಿನಲ್ಲಿ ಹಾರೆ, ಸಲಾಕೆ, ಗುದ್ದಲಿ, ಮಚ್ಚುಗಳು, ಮೋಟಾರ್, ಪೈಪ್‌ಗಳು, ತಂತಿಗಳು, ಬಕೆಟ್, ವುಡ್ ಕಟರ್, ಗರಗಸ, ಪಿಕಾಸಿ ಸೇರಿ ಅಗತ್ಯ ಸಲಕರೆಗಳನ್ನು ಇಟ್ಟುಕೊಂಡಿದ್ದು, ಇದರ ಫೋಟೋಗಳು ವೈರಲ್ ಆಗಿವೆ.
ವೇಗವಾಗಿ ಸುಗಮ ಸಂಚಾರ ಕಲ್ಪಿಸಲು:
ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಯಾವುದಾದರೂ ಮಳೆ ಹಾನಿ ಸಂಬಂಧಿಸಿದಾಗ ಕೂಡಲೇ ಸಂಚಾರ ಪೊಲೀಸರು ತುರ್ತು ಕಾರ್ಯಾಚರಣೆಗೆ ಇಳಿಯುತ್ತಾರೆ. ಮಳೆ ಹಾನಿಗೆ ತ್ವರಿತವಾಗಿ ಸ್ಪಂದಿಸಲು ಸಲಕರಣೆ ಇಟ್ಟುಕೊಂಡು ಓಡಾಡುತ್ತಿದ್ದೇವೆ. ಅದರಿಂದ ದಟ್ಟಣೆ ತಡೆಯುವ ಉದ್ದೇಶ ನಮ್ಮದು. ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಸಾಕಷ್ಟು ಕಾರ್ಯಗಳು ನಮ್ಮ ಕಡೆಯಿಂದ ನಡೆದರೆ, ವೇಗವಾಗಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬಹುದು ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.