ಒಕ್ಕೂಟ ವ್ಯವಸ್ಥೆ ಮುಖ್ಯ: ರಾಜ್ಯಪಾಲ-ಸಿಎಂ ತಿಕ್ಕಾಟ ಆಡಳಿತಕ್ಕೆ ಅಡಚಣೆ

Punjab Governer CM
Published on

ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ಶಿಷ್ಟಾಚಾರಕ್ಕೆ ಅನುಗುಣವಾಗಿ ಹೆಚ್ಚು ಪ್ರಬುದ್ಧತೆಯಿಂದ ವರ್ತಿಸಬೇಕು ಎಂದು ಸುಪ್ರೀಂ ಕೋರ್ಟ್ ಕಿವಿಮಾತು ಹೇಳಿರುವುದು ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಮತ್ತು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಬೀಸಿದ ಛಾಟಿ ಏಟಿನಂತಿದೆ. ವಿಧಾನಸಭೆಯ ಬಜೆಟ್ ಅಧಿವೇಶನ ಕರೆಯಲು ರಾಜ್ಯಪಾಲರು ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿ ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳಿದ್ದ ದ್ವಿಸದಸ್ಯ ನ್ಯಾಯಪೀಠ, ‘ರಾಜ್ಯಪಾಲರಾದವರು ಸಚಿವ ಸಂಪುಟದ ಸಲಹೆ ಹಾಗೂ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಕ್ಕೆ ಬದ್ಧರಾಗಿರಬೇಕು. ಹಾಗೆಯೇ ರಾಜ್ಯದ ಮುಖ್ಯಮಂತ್ರಿ ಆಗಿರುವವರು ರಾಜ್ಯಪಾಲರು ಕೋರಿದ ಎಲ್ಲಾ ಮಾಹಿತಿಗಳನ್ನು ಒದಗಿಸಬೇಕು’ ಎಂದು ಹೇಳಿದೆ.

ಈ ವಿಷಯವನ್ನು ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು ಸುಪ್ರೀಂ ಕೋರ್ಟ್ ಇದನ್ನು ಪುನರುಚ್ಚರಿಸಿದೆ. ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ಸಮಚಿತ್ತ ಹಾಗೂ ಪ್ರಬುದ್ಧತೆಯಿಂದ ವರ್ತಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಹಾಗಂತ ರಾಜಕಾರಣವನ್ನು ಇಷ್ಟೊಂದು ಕೀಳುಮಟ್ಟಕ್ಕೆ ಕೊಂಡೊಯ್ಯಬಾರದು. ಇಬ್ಬರ ಕಡೆಯಿಂದಲೂ ಲೋಪವಾಗಿದೆ. ಅಧಿವೇಶನ ಕರೆಯದ ಕುರಿತು ರಾಜ್ಯಪಾಲರಿಂದಲೂ ಯಾವುದೇ ಸಮರ್ಥನೆ ಇಲ್ಲ ಎಂದು ನ್ಯಾಯಪೀಠವು ಕಟುವಾದ ಮಾತುಗಳಲ್ಲಿ ಹೇಳಿರುವುದು ಉಭಯತ್ರರ ಕಾರ್ಯನಿರ್ವಹಣೆ ವೈಖರಿಯನ್ನೇ ಪ್ರಶ್ನಿಸುವಂತಿದೆ. ರಾಜ್ಯ ಸರ್ಕಾರಗಳು ಹಾಗೂ ರಾಜ್ಯಪಾಲರ ನಡುವಿನ ಜಟಾಪಟಿ, ಬಿಕ್ಕಟ್ಟು ಹೊಸದೇನಲ್ಲ.

ಕೇಂದ್ರದಲ್ಲಿ ಒಂದು ಪಕ್ಷದ ಸರ್ಕಾರ ಹಾಗೂ ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರ ಇರುವಾಗಲಂತೂ ಮುಸುಕಿನ ಗುದ್ದಾಟ ಸದಾ ಇದ್ದೇ ಇರುತ್ತದೆ. ಆದರೆ, ಸಂವಿಧಾನದ ಚೌಕಟ್ಟನ್ನು ಮೀರಿ ಯಾರಾದರೊಬ್ಬರು ಅಥವಾ ಉಭಯತ್ರರು ವರ್ತಿಸತೊಡಗಿದರೆ ಇದು ಜಗಳದ ರೂಪ ಪಡೆದುಕೊಂಡು ಸರ್ಕಾರದ ಸುಗಮ ಕಾರ್ಯನಿರ್ವಹಣೆಗೆ ಅಡಚಣೆ ಉಂಟು ಮಾಡುವ ಹಂತಕ್ಕೂ ಹೋಗಬಹುದಾಗಿದೆ. ಭಾರತವು ಒಕ್ಕೂಟ ವ್ಯವಸ್ಥೆಯ ರಾಷ್ಟ್ರವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ರಾಜ್ಯ ಸರ್ಕಾರಗಳು ಆಡಳಿತ ನಡೆಸುತ್ತವೆ. ಸುಗಮ ಆಡಳಿತಕ್ಕೆ ಹಾಗೂ ಪ್ರಜಾಪ್ರಭುತ್ವದ ಯಶಸ್ಸಿಗೆ ಉಭಯ ಸರ್ಕಾರಗಳ ನಡುವೆ ಸಮನ್ವಯ ಹಾಗೂ ಸಹಕಾರ ಅತ್ಯಗತ್ಯ. ಕೇಂದ್ರದಂತೆ ರಾಜ್ಯ ಸರ್ಕಾರ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದಲೇ ಆಯ್ಕೆಯಾಗಿರುತ್ತದೆ ಎಂಬುದನ್ನು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿರುವ ರಾಜ್ಯಪಾಲರು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಣೆ ಮಾಡುವುದು ಒಕ್ಕೂಟ ವ್ಯವಸ್ಥೆಯಲ್ಲಿ ಅಪೇಕ್ಷಣೀಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net