

ನೋಯ್ಡಾ: ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಜನರಿಗೆ ಸ್ಮಾರ್ಟ್ಫೋನ್ ಲಭ್ಯವಾಗಬೇಕೆಂದು, ಕೇವಲ 251 ರೂಪಾಯಿಗೆ ಮೊಬೈಲ್ ಮಾರಾಟ ಮಾಡಲು ಆರಂಭಿಸಿದ್ದ ಸಂಸ್ಥೆಯ ಸಂಸ್ಥಾಪಕ ಮೋಹಿತ್ ಗೋಯಲ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಡ್ರೈಫ್ರೂಟ್ಸ್ ವ್ಯವಹಾರದ ಹೆಸರಿನಲ್ಲಿ ನೂರಾರು ವ್ಯಾಪಾರಿಗಳಿಗೆ 200 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿದೆ.
ಫ್ರೀಡಂ 251 ಸ್ಮಾರ್ಟ್ಫೋನ್ ಬಗ್ಗೆ ನಿಮಗೆ ಗೊತ್ತಿರಬಹುದು. ಕೆಲ ವರ್ಷಗಳ ಹಿಂದೆ ಇಂತದ್ದೊಂದು ಸಂಸ್ಥೆಯನ್ನು ಮೋಹಿತ್ ಪ್ರಾರಂಭಿಸಿದ್ದರು. ಕೇವಲ 251 ರೂಪಾಯಿಗೆ ಸ್ಮಾರ್ಟ್ಫೋನ್ ಮಾರಾಟ ಮಾಡುವುದಾಗಿ ತಿಳಿಸಿದ್ದರು. ಆದರೆ ಅವರ ಈ ಫೋನನ್ನು ಜನ ಮೆಚ್ಚದ ಕಾರಣ ಸಂಸ್ಥೆ ಮರೆಯಾಗಿತ್ತು. ಅದೇ ಮೋಹಿತ್ ತನ್ನ ಕೆಲ ಗೆಳೆಯರೊಂದಿಗೆ ಸೇರಿಕೊಂಡು ದುಬೈ ಡ್ರೈ ಫ್ರೂಟ್ಸ್ ಅಂಡ್ ಸ್ಪೈಸಸ್ ಹಬ್ ಹೆಸರಿನ ಸಂಸ್ಥೆಯನ್ನು ತೆರೆದಿದ್ದರು.
ತಮ್ಮ ಈ ಡ್ರೈಫ್ರೂಟ್ಸ್ ಸಂಸ್ಥೆಯ ಮೂಲಕ ವಿವಿಧ ರಾಜ್ಯಗಳ ಡ್ರೈಫ್ರೂಟ್ಸ್ ವ್ಯವಹಾರಸ್ಥರ ಬಳಿ ಡ್ರೈಫ್ರೂಟ್ಸ್ ಖರೀದಿಸಲಾಗುತ್ತಿತ್ತು. ಆರಂಭದಲ್ಲಿ ಮಾರುಕಟ್ಟೆಗೆ ಬೆಲೆಗಿಂತ ಹೆಚ್ಚಿನ ಹಣವನ್ನು ಕೊಟ್ಟೇ ಖರೀದಿ ಮಾಡಲಾಗಿದೆ. ಈ ರೀತಿ ನಂಬಿಕೆ ಬೆಳೆಸಿಕೊಂಡ ನಂತರ ಹೆಚ್ಚಿನ ಮೊತ್ತದ ಡ್ರೈಫ್ರೂಟ್ಸ್ಗೆ ಆರ್ಡರ್ ನೀಡಲಾಗಿದೆ. ಅದಕ್ಕೆ ಶೇ. 40 ಹಣವನ್ನು ಮುಂಗಡವಾಗಿ ಪಾವತಿ ಮಾಡಲಾಗಿದೆ. ಉಳಿದ ಹಣವನ್ನು ಚೆಕ್ನಲ್ಲಿ ಬರೆದುಕೊಡಲಾಗಿದೆ. ಆದರೆ ಆ ಚೆಕ್ ಬೌನ್ಸ್ ಆಗಿದೆ. ಈ ರೀತಿ ಒಂದಲ್ಲ ಎರಡಲ್ಲ ಬರೋಬ್ಬರಿ 40ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಮೋಸ ಮಾಡಲಾಗಿದ್ದು ಅವರೆಲ್ಲರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರನ್ನು ಆಧರಿಸಿ ಮೋಹಿತ್ ಮತ್ತು ಓಂ ಪ್ರಕಾಶ್ ಜಾಗಿದ್ ಹೆಸರಿನ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನುಳಿದಂತೆ ಸುಮಿತ್ ಯಾದವ್, ರಾಜೀವ್ ಕುಮಾರ್ ಮತ್ತು ಪ್ರವೀಣ್ ಸಿಂಗ್ ನಿರ್ವಾನ್ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ನೋಯ್ಡಾದಲ್ಲಿ ಕಂಪನಿಯ ಕಚೇರಿಯಿಂದ 60 ಕೆಜಿ ಡ್ರೈಫ್ರೂಟ್ಸ್ ಮತ್ತು ಕೆಲವು ದಾಖಲೆಗಳು ಸೇರಿದಂತೆ ಎರಡು ಕಾರನ್ನು ವಶ ಪಡಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶ, ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಸೇರಿ ಅನೇಕ ರಾಜ್ಯಗಳ ವ್ಯಾಪಾರಿಗಳಿಗೆ ಈ ಗ್ಯಾಂಗ್ ಮೋಸ ಮಾಡಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)