

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶಿವರಾತ್ರಿ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀಮಂಜುನಾಥ ಸ್ವಾಮಿ ಸನ್ನಿಧಿ ಶಿವ ಜಾಗರಣೆಯಲ್ಲಿ ಭಾಗವಹಿಸುತ್ತಿದ್ದು, ಭಕ್ತರಿಗೆ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಡಾ.ಹೆಗ್ಗಡೆ ಅವರ ಆದೇಶ, ಹೇಮಾವತಿ ವಿ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಉಚಿತ ಔಷಧ, ವೈದ್ಯಕೀಯ ಸೇವೆ ನೀಡಲಾಯಿತು.
ಪಾದಯಾತ್ರಿಗಳ ಆರೋಗ್ಯ ರಕ್ಷಣೆ, ಸಹಾಯಕ್ಕೆ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ವತಿಯಿಂದ ಚಾರ್ಮಾಡಿ, ಮುಂಡಾಜೆ, ಧರ್ಮಸ್ಥಳ, ಬೂಡುಜಾಲು, ಎಸ್‌ಡಿಎಂ ಡಿಎಡ್ ಕಾಲೇಜುಗಳಲ್ಲಿ ಆರೋಗ್ಯ ಸೇವಾ ಕೌಂಟರ್ ತೆರೆದು ಪಾದಯಾತ್ರಾರ್ಥಿಗಳಿಗೆ ಆರೋಗ್ಯ ತಪಾಸಣೆ, ಅಗತ್ಯವಿರುವ ಔಷಧ, ಲಸಿಕೆ, ಮುಲಾಮು, ಸ್ಪ್ರೇ, ಬ್ಯಾಂಡೇಜ್, ಗ್ಲುಕೋಸ್ ಇತ್ಯಾದಿಗಳನ್ನು ಉಚಿತವಾಗಿ ಒದಗಿಸಲಾಯಿತು. ಪ್ರತಿ ಕೌಂಟರ್‌ಗಳಲ್ಲಿ ವೈದ್ಯರು, ದಾದಿಯರು, ಸಹಾಯಕರು ಆರೋಗ್ಯ ರಕ್ಷಣೆಯಲ್ಲಿ ಸಹಕರಿಸಿದರು.
ದಣಿದು ಬಂದ ಪಾದಯಾತ್ರಿಗಳಿಗೆ ಉಚಿತ ಔಷಧದೊಂದಿಗೆ ಕಲ್ಲಂಗಡಿ ಹಣ್ಣು, ನಿಂಬೆ ಶರಬತ್ತು, ಬೆಲ್ಲ ನೀರು ಒದಗಿಸಲಾಗಿತ್ತು. ಈ ಬಾರಿ 31,874 ಪಾದಯಾತ್ರಿಗಳಿಗೆ ಆರೋಗ್ಯ ಉಚಿತ ತಪಾಸಣೆ, ವೈದ್ಯಕೀಯ ಸೇವೆ ನೀಡಲಾಯಿತು. 9,45,000 ರೂ. ಡಾ.ಹೆಗ್ಗಡೆ ಅವರ ನಿರ್ದೇಶನದಂತೆ ಪಾದಯಾತ್ರಿಗಳ ಆರೋಗ್ಯ ವೈದ್ಯಕೀಯ ಸೇವೆಗಾಗಿ ಖರ್ಚು ಮಾಡಲಾಯಿತು. ಶಿಬಿರಗಳಿಗೆ ಭೇಟಿ ನೀಡಿದವರು ಅಲ್ಲಿ ಮಾಡಲಾದ ವ್ಯವಸ್ಥೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ತಿಳಿಸಿದ್ದಾರೆ.