

ಬೆಂಗಳೂರು: ಕೃಷಿ ನೆಚ್ಚಿಕೊಂಡ ಯುವಕರಿಗೆ ಹೆಣ್ಣು ಕೊಡಿಸುವ ನೆಪದಲ್ಲಿ ವಂಚಿಸುವ ದಂಧೆ ಒಂದೆಡೆಯಾದರೆ, ಮತ್ತೊಂದೆಡೆ ಕೃಷಿ ಕಾರ್ಮಿಕರನ್ನು ಕಳುಹಿಸುವುದಾಗಿ ಆನ್‌ಲೈನ್‌ನಲ್ಲಿ ಹಣ ಪಡೆದು ವಂಚಿಸುವ ಜಾಲವೂ ಶುರುವಾಗಿದೆ.
ಇಂತಹದೊಂದು ವಂಚನೆ ಜಾಲ ಬೆಳಕಿಗೆ ಬಂದಿದ್ದು, ಯಲಹಂಕದ ವೀರಸಂದ್ರ ರಸ್ತೆಯ ಸರ್ಕಾರಿ ಮಹಿಳಾ ಅಧಿಕಾರಿಗೆ 50 ಸಾವಿರ ರೂ. ವಂಚನೆ ಮಾಡಿದ್ದಾರೆ. ಈ ಕುರಿತು ಮಹಿಳಾ ಅಧಿಕಾರಿ ಕೊಟ್ಟ ದೂರಿನ ಮೇರೆಗೆ ಕೇಂದ್ರ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೃಷಿ ಕಾರ್ಮಿಕ ಕುಟುಂಬ ಅಗತ್ಯವಿದ್ದ ಕಾರಣಕ್ಕೆ ಆನ್‌ಲೈನ್‌ನಲ್ಲಿ ಮಹಿಳಾ ಅಧಿಕಾರಿ ಸರ್ಚ್ ಮಾಡುವಾಗ ‘ಅಗ್ರಿಕಲ್ಚರಲ್ ಲೇಬರ್ ಫ್ಯಾಮಿಲಿ ಗ್ರೂಪ್ ಪತ್ತೆಯಾಗಿತ್ತು. ಅದರಲ್ಲಿ ಕೃಷಿ ಕಾರ್ಮಿಕ ಕುಟುಂಬ ಬೇಕಾದರೆ ಸಂಪರ್ಕ ಮಾಡಬಹುದು ಎಂದು ಜಾಹೀರಾತು ನೀಡಿ ಮೊಬೈಲ್ ಸಂಖ್ಯೆ ನೀಡಲಾಗಿತ್ತು. ಇದನ್ನು ಗಮನಿಸಿದ ಮಹಿಳಾ ಅಧಿಕಾರಿ, ಡಿ. 15ರಂದು ಆ ಸಂಖ್ಯೆಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿ ಸ್ವೀಕರಿಸಿದ್ದ. ‘ನಾನು ಕೃಷಿ ಕೆಲಸಕ್ಕೆ ಬರುತ್ತೇನೆ. ನನಗೆ ರೈಲ್ವೆ ಟಿಕೆಟ್‌ಗಾಗಿ 3,300 ರೂ. ಅಗತ್ಯವಿದೆ. ಸದ್ಯ ಫೋನ್ ಪೇ ಮಾಡಿದರೆ ಬರುತ್ತೇನೆ’ ಎಂದು ಭರವಸೆ ನೀಡಿದ್ದ. ಅದರಂತೆ ಮಹಿಳಾ ಅಧಿಕಾರಿ 3,300 ರೂ. ವರ್ಗಾವಣೆ ಮಾಡಿದ್ದರು.
ಮಾರನೇ ದಿನ ರೈಲ್ವೆ ಟಿಕೆಟ್‌ಗೆ ಹೆಚ್ಚುವರಿ ಹಣ ಬೇಕಾಗಿದೆ ಎಂದು ಹೇಳಿದಾಗ ಮತ್ತೆ 4,900 ರೂ. ಅನ್ನು ಆರೋಪಿ ಕಳುಹಿಸಿದ್ದ ಕ್ಯೂಆರ್ ಕೋರ್ಡ್ ಸ್ಕಾೃನ್ ಮಾಡಿ ವರ್ಗಾವಣೆ ಮಾಡಿದ್ದರು. ಮತ್ತೆ ಮುಗಂಡ ಹಣ ಬೇಕೆಂದು ಕೇಳಿದಾಗ ಮತ್ತೆ 10 ಸಾವಿರ ರೂ. ಕಳುಹಿಸಿದ್ದರು. ಕೊನೆಗೆ ಡಿಸೆಂಬರ್ 16ರಂದು ಈ ಹಿಂದೆ ಕಳುಹಿಸಿದ್ದ ಯಾವುದೇ ಹಣ ನನ್ನ ಬ್ಯಾಂಕ್ ಖಾತೆಗೆ ಬಂದಿಲ್ಲ. ನಾನು ನಿಮ್ಮ ೆನ್ ಪೇಗೆ 1 ರೂಪಾಯಿ ವರ್ಗಾವಣೆ ಮಾಡುತ್ತೇನೆ, ಆ ನಂತರ ವಾಪಸ್ ಅದೇ ಖಾತೆಗೆ ಹಣ ಕಳುಹಿಸುವಂತೆ ತಿಳಿಸಿದ್ದ. ಇದನ್ನೂ ನಂಬಿದ ಮಹಿಳಾ ಅಧಿಕಾರಿ 10 ಸಾವಿರ ರೂ. ವರ್ಗಾವಣೆ ಮಾಡಿದ್ದರು. ಕೃಷಿ ಕೂಲಿ ಕಾರ್ಮಿಕನನ್ನು ನೇಮಕ ಮಾಡಿಕೊಳ್ಳಲು ಅಪರಿಚಿತ ವ್ಯಕ್ತಿಗೆ 50 ಸಾವಿರ ರೂ. ಅನ್ನು ವರ್ಗಾವಣೆ ಮಾಡಿ ಮೋಸಕ್ಕೆ ಒಳಗಾಗಿದ್ದರು. ಕೊನೆಗೆ ಇದೊಂದು ಸೈಬರ್ ವಂಚನೆ ಎಂದು ಗೊತ್ತಾಗಿ ಕೇಂದ್ರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ.