ಷೇರು ಮಾರುಕಟ್ಟೆ ಹೂಡಿಕೆ ಹೆಸರಲ್ಲಿ ವಂಚನೆ; ಚೀನಾ ಜೊತೆ ಸಂಪರ್ಕ ಹೊಂದಿದ್ದ ಇಬ್ಬರು ವಂಚಕರ ಬಂಧನ| Fraud

delhi
Published on

ಗುಜರಾತ್ ನಿವಾಸಿ ವಡ್ಡೋರಿಯಾ ಕೆವಿನ್ ಮುಖೇಶ್ ಭಾಯ್ ಮತ್ತು ಉತ್ತರಾಖಂಡ್ ನಿವಾಸಿ ಅಬ್ದುಲ್ ಬಾರಿಕ್ ಬಂಧನಕ್ಕೊಳಗಾದ ವ್ಯಕ್ತಿಗಳಾಗಿದ್ದಾರೆ.

ನವದೆಹಲಿ: ದೆಹಲಿ ಪೊಲೀಸರ ವಿಶೇಷ ಘಟಕದ ಗುಪ್ತಚರ ಸಮ್ಮಿಳನ ಮತ್ತು ಕಾರ್ಯತಂತ್ರದ ಕಾರ್ಯಾಚರಣೆ (IFSO) ಘಟಕವು ಬ್ಯಾಂಕ್ ಖಾತೆಗಳು ಮತ್ತು ಕ್ರಿಪ್ಟೋಕರೆನ್ಸಿ ಪಾವತಿಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಅಂತರರಾಷ್ಟ್ರೀಯ ಹೂಡಿಕೆ ವಂಚನೆ ಸಿಂಡಿಕೇಟ್​ಅನ್ನು ಭೇದಿಸಿ ಇಬ್ಬರು ವಂಚಕರನ್ನು ಬಂಧಿಸಿದೆ.

ಬಿಸಿನೆಸ್ ಕ್ಯಾಟಲಿಸ್ಟ್ ಮಾರ್ಕೆಟ್ ಲಿಮಿಟೆಡ್ ಎಂಬ ನಕಲಿ ವೇದಿಕೆಯ ಮೂಲಕ ನಕಲಿ ಐಪಿಒಗಳು ಮತ್ತು ಷೇರು ವ್ಯಾಪಾರದಲ್ಲಿ ಹೂಡಿಕೆ ಮಾಡುವಂತೆ ಬಲಿಪಶುವನ್ನು ಆಮಿಷವೊಡ್ಡಲಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಐದು ವಿಭಿನ್ನ ಖಾತೆಗಳಿಗೆ ಹಣವನ್ನು ವರ್ಗಾಯಿಸಿಕೊಳ್ಳಲಾಗಿದೆ. ದೂರಿನ ಬಳಿಕ, ಭಾರತೀಯ ದಂಡ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 318(4), 319(2) ಮತ್ತು 61(2) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಅವರಲ್ಲಿ ಒಬ್ಬರು ಚೀನಾದ ಸೈಬರ್ ನೆಟ್‌ವರ್ಕ್‌ನೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿದೆ. ದೆಹಲಿ ಪೊಲೀಸ್​ ಪ್ರಕಟಣೆಯ ಪ್ರಕಾರ, ದೆಹಲಿ ನಿವಾಸಿ ಅಶೋಕ್ ಕುಮಾರ್ ಅವರು ಏಪ್ರಿಲ್ 2, 2025 ರಂದು ದೂರು ದಾಖಲಿಸಿದ ನಂತರ ಈ ಗ್ಯಾಂಗ್ ಬೆಳಕಿಗೆ ಬಂದಿದ್ದು, ಅವರು ತಮಗೆ 64.75 ಲಕ್ಷ ರೂ. ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಚೀನೀ ಅಪ್ಲಿಕೇಶನ್‌ಗಳಿಂದ ಹಣದ ಆಮಿಷ

ಪೊಲೀಸ್ ವಿಚಾರಣೆಯಲ್ಲಿ ಪ್ರಮುಖ ಆರೋಪಿ ಕೆವಿನ್ "ಗೇಮಿಂಗ್ ಅಡ್ಡಾ" ಮತ್ತು "ಹೈ-ಪೇ" ನಂತಹ ಹಲವು ಚೀನೀ ಸೈಬರ್ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದನೆಂದು ತಿಳಿದುಬಂದಿದೆ. ಈ ಗ್ಯಾಂಗ್‌ಗಳು ಸಾಮಾಜಿಕ ಮಾಧ್ಯಮ ಮತ್ತು ಟೆಲಿಗ್ರಾಮ್‌ನಂತಹ ವೇದಿಕೆಗಳ ಮೂಲಕ ಜನರನ್ನು ಸಂಪರ್ಕಿಸಿ ಬ್ಯಾಂಕ್ ಖಾತೆಗಳು ಮತ್ತು ಸಿಮ್ ಕಾರ್ಡ್‌ಗಳನ್ನು ನೀಡುವುದಾಗಿ ಹಣದ ಆಮಿಷ ಒಡ್ಡುತ್ತಿದ್ದರು. ಈ ಖಾತೆಗಳನ್ನು ಬಳಸಿಕೊಂಡು ವಂಚನೆಗೊಳಗಾದ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಆರೋಪಿಗಳ 6 ಮೊಬೈಲ್ ವಶಕ್ಕೆ

(ಏಜೆನ್ಸೀಸ್)

ಆರೋಪಿಗಳಿಂದ ಪೊಲೀಸರು 6 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ಅವುಗಳಲ್ಲಿ ಹಲವು ಚೀನೀ ಅಪ್ಲಿಕೇಶನ್‌ಗಳು ಮತ್ತು ಆನ್‌ಲೈನ್ ವ್ಯಾಲೆಟ್‌ಗಳು ಇದ್ದವು ಎಂದು ತಿಳಿದು ಬಂದಿದೆ. ಈ ಗ್ಯಾಂಗ್‌ನ ಇತರ ಸದಸ್ಯರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net