

Ice cream : ಪುಟಾಣಿ ಮಕ್ಕಳು ತಮ್ಮ ಪಾಲಕರ ವಿರುದ್ಧವೇ ಪೊಲೀಸರಿಗೆ ದೂರು ನೀಡಿರುವಂತಹ ಕೆಲ ಅಪರೂಪದ ಘಟನೆಗಳನ್ನು ನಾವು ನೋಡಿದ್ದೇವೆ. ಚಾಕೋಲೆಟ್ ಕೊಡದಿದ್ದಕ್ಕೆ, ಆಟವಾಡಲು ಬಿಡದಿದ್ದಕ್ಕೆ ದೂರು ನೀಡಿದ ಉದಾಹರಣೆಗಳಿವೆ. ಇದೀಗ ನಾಲ್ಕು ವರ್ಷದ ಬಾಲಕನೊಬ್ಬ ತನ್ನ ತಾಯಿ ಐಸ್ಕ್ರೀಮ್ ತಿಂದಿದ್ದಕ್ಕೆ ದೂರು ನೀಡಿದ್ದಾರೆ.
ಅಮೆರಿಕದಲ್ಲಿ ಈ ಘಟನೆ ನಡೆದಿದೆ. ತನ್ನ ತಾಯಿ ಐಸ್ ಕ್ರೀಮ್ ತಿಂದಿರುವುದು ಬಾಲಕನಿಗ ತಿಳಿದಾಗ, ಆತ ತಕ್ಷಣ ತುರ್ತು ಸಂಖ್ಯೆ 911ಕ್ಕೆ ಕರೆ ಮಾಡಿ ತನ್ನ ತಾಯಿ ಮಾಡಿದ ತಪ್ಪಿನ ಬಗ್ಗೆ ಅಧಿಕಾರಿಗಳಿಗೆ ತಿಳಿಸುತ್ತಾನೆ. ಈ ವೇಳೆ ತನಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಆ ಬಾಲಕನಿಗಿತ್ತು.
ತನ್ನ ಮಗ ಕರೆ ಮಾಡುವುದನ್ನು ತಾಯಿ ಗಮನಿಸಿದಾಗ, ಆಕೆ ತಕ್ಷಣ ಫೋನ್ ಕಿತ್ತುಕೊಳ್ಳುತ್ತಾಳೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಮಹಿಳೆ, ಪೊಲೀಸರಿಗೆ ತಿಳಿಸುತ್ತಾಳೆ. ಆದರೆ, ಮಗು ಮಾತ್ರ ತನ್ನ ತಾಯಿಯನ್ನು ಜೈಲಿಗೆ ಹಾಕಬೇಕೆಂದು ಒತ್ತಾಯಿಸುತ್ತದೆ. ಮಗನ ಐಸ್ ಕ್ರೀಮ್ ತಿಂದಿದ್ದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಆ ಮಹಿಳೆ ಪೊಲೀಸರಿಗೆ ಹೇಳುತ್ತಾಳೆ.
ಮಹಿಳೆ ಹೇಳಿದನ್ನು ಕೇಳಿಸಿಕೊಂಡ ಪೊಲೀಸರು ತಕ್ಷಣ ಐಸ್ ಕ್ರೀಮ್ನೊಂದಿಗೆ ಮನೆಗೆ ಬಂದರು. ಈ ವೇಳೆ ಐಸ್ಕ್ರೀಮ್ ನೋಡಿದ ಮಗು ತನ್ನ ಮನಸ್ಸನ್ನು ಬದಲಾಯಿಸಿತು. ತನಗೆ ಐಸ್ ಕ್ರೀಮ್ ಮಾತ್ರ ಬೇಕು ಮತ್ತು ನನ್ನ ತಾಯಿಯ ಬಂಧನವನ್ನು ಬಯಸುವುದಿಲ್ಲ ಎಂದು ಹೇಳುತ್ತಾನೆ. ಮಗುವಿನ ಮಾತು ಕೇಳಿದ ಪೊಲೀಸರು ಮುಗುಳ್ಕಕ್ಕು ಅಲ್ಲಿಂದ ಹಿಂತಿರುಗುತ್ತಾರೆ.
ಪೊಲೀಸರು ಮಗುವಿಗೆ ಐಸ್ ಕ್ರೀಮ್ ನೀಡುತ್ತಿರುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಆ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಸಕ್ತಿದಾಯಕ ಕಾಮೆಂಟ್‌ಗಳು ಬರುತ್ತಿವೆ. ಅದೇ ಸಮಯದಲ್ಲಿ, ಕೆಲವರು ಪೊಲೀಸರ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಮಗುವನ್ನು ಟೀಕಿಸಿದ್ದಾರೆ. (ಏಜೆನ್ಸೀಸ್)