

ಮುಂಬೈ: ತಮ್ಮ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿರುವ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರು ಮಂಗಳವಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಮುಂಬೈ ನಗರದ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು 100 ಕೋಟಿ ರೂಪಾಯಿ ಲಂಚ ವಸೂಲಿ ಆರೋಪವನ್ನು ಅನಿಲ್ ದೇಶಮುಖ್ ಅವರ ಮೇಲೆ ಮಾಡಿದ್ದರು. ಇದರಿಂದ ತೀವ್ರ ಮುಜಗರಕ್ಕೆ ಒಳಗಾಗಿದ್ದ ಅನಿಲ್ ದೇಶಮುಖ್ ಅವರ ರಾಜೀನಾಮೆಗೆ ಪ್ರತಿ ಪಕ್ಷಗಳು ಆಗ್ರಹಿಸಿದ್ದವು. ಅಲ್ಲದೇ ಪರಮ್ ಬೀರ್ ಸಿಂಗ್ ಲಂಚದ ಆರೋಪದ ಕುರಿತಂತೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಸಿಂಗ್ ಅವರ ಅರ್ಜಿ ಪರಿಗಣಿಸಿದ್ದ ಬಾಂಬೆ ಹೈಕೋರ್ಟ್ ಸಿಬಿಐ ತನಿಖೆಗೆ ಅಸ್ತು ಎಂದಿತ್ತು. ಇದರಿಂದ ಅನಿವಾರ್ಯವಾಗಿ ದೇಶಮುಖ್ ಸೋಮವಾರ ರಾಜೀನಾಮೆ ನೀಡಿದ್ದರು. ಅವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ಇದೇ ವೇಳೆ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವೂ ಸುಪ್ರೀಂಕೋರ್ಟ್ ಕದ ತಟ್ಟಿದೆ. ಅಲ್ಲದೇ ಆರು ಅಧಿಕಾರಿಗಳನ್ನೊಳಗೊಂಡ ಸಿಬಿಐ ತಂಡ ಈ ಪ್ರಕರಣದ ಪ್ರಾಥಮಿಕ ತನಿಖೆ ಮಾಡಲು ಮುಂಬೈಗೆ ಆಗಮಿಸಿದೆ ಎಂದು ಪಿಟಿಐ ವರದಿ ಮಾಡಿದೆ.