

ವಿಜಯಪುರ: ‘ನಾನು ಹಿಂದು ಅಲ್ವಾ?, ನಮ್ಮವ್ವ-ನಮ್ಮಪ್ಪ ಹಿಂದುಗಳಲ್ಲವಾ? ನನ್ನ ಹೆಸರು ಹಿಂದು ಅಲ್ಲವಾ? ಎಂದು ಪ್ರಶ್ನೆಗಳಿಗೆ ಮರು ಪ್ರಶ್ನೆ ಎಸೆಯುತ್ತಲೇ ಮಾಜಿ ಸಿಎಂ ಸಿದ್ದರಾಮಯ್ಯ ಸಿ.ಟಿ. ರವಿಗೆ ಕುಟುಕಿದ್ದಾರೆ.
ಪ್ರಜಾಧ್ವನಿ ಯಾತ್ರೆ ಹಿನ್ನೆಲೆ ಶನಿವಾರ ಸಿಂದಗಿ ವಿಧಾನ ಸಭೆ ಕ್ಷೇತ್ರಕ್ಕೆ ಆಗಮಿಸಿದ್ದ ಅವರು ಯಾತ್ರೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಹಿಂದು, ನಮ್ಮವ್ವ-ನಮ್ಮಪ್ಪ ಹಿಂದು. ನನ್ನ ಹೆಸರು ಸಿದ್ದರಾಮಯ್ಯ ಎಂದಿರಿಸಿಲ್ಲವೇ? ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ? ಎಂದು ಪ್ರಶ್ನಿಸಿದರು.
ಮುಂದುವರಿದು ಹಿಂದು ಹಾಗೂ ಹಿಂದುತ್ವ ಎಂಬ ಪದದ ಬಗ್ಗೆ ನಿಮಗೆ ಗೊತ್ತಾ ಎಂದು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು. ಹಿಂದುತ್ವದ ಬಗ್ಗೆ ಗೊತ್ತಿದ್ದರೆ ತಿಳಿಸಿ, ಗೊತ್ತಿಲ್ಲದಿದ್ದರೆ ಕೇಳುವುದು ಬೇಡ ಎಂದರು.
ನಮ್ಮ ಸರ್ಕಾರದಲ್ಲಿ 15 ಲಕ್ಷ ಮನೆಗಳನ್ನು ಕೊಟ್ಟಿದ್ದೆವು. ಎಲ್ಲವೂ ಮುಸ್ಲಿಂರಿಗೆ ಕೊಟ್ಟಿದ್ದೆವಾ? ಕೇವಲ 5 ರಷ್ಟು ಮುಸ್ಲಿಂರಿಗೆ ಕೊಟ್ಟಿತ್ತು. ಶೇ. 95 ರಷ್ಟು ಹಿಂದುಗಳಿಗೆ ಕೊಡಲಾಗಿತ್ತು. ಮುಸ್ಲಿಂ ಇರುವುದು ಕೇವಲ ಶೇ.34 ರಷ್ಟು. ಬೇರೆಯವರೆಲ್ಲ ಹಿಂದುಗಳಲ್ಲವಾ? ಅಲ್ಲಿರುವ ಬಡವರಿಗೆ ರಕ್ಷಣೆ ಕೊಡಬೇಕಲ್ಲವಾ? ಅವರ ಪರವಾಗಿ ಮಾತನಾಡಿದರೆ ಮತಕ್ಕಾಗಿ ಮಾತನಾಡುತ್ತಾರೆನ್ನುತ್ತಾರೆ. ತಮ್ಮ ಸುಳ್ಳು ಮುಚ್ಚಿಕೊಳ್ಳಲು ಬಿಜೆಪಿ ಇಲ್ಲ ಸಲ್ಲದ ಹೇಳಿಕೆ ಕೊಡುತ್ತಿದೆ. ಲಂಬಾಣಿ ಜನರಿಗೆ ತಾಂಡಾಗಳನ್ನು ಕಂದಾಯ ಗ್ರಾಮ ಮಾಡಲು ಕಾನೂನು ಮಾಡಿದ್ದು ನಾವು. ಇಲ್ಲಿ ಹಕ್ಕು ಪತ್ರ ಕೊಡಲು ಬಂದು ಯೋಜನೆ ನಮ್ಮದೆಂದರೆ? ಅಡುಗೆ ಮಾಡಿದ್ದು ನಾವು ಬಡಿಸಿಬಿಟ್ಟು ನಮ್ಮದೆಂದಂತಿದೆ ಎಂದರು.