

ಬೆಂಗಳೂರು: ಬಸವಣ್ಣನವರ 'ಕಾಯಕವೇ ಕೈಲಾಸ' ನುಡಿಯಂತೆ ಕಳೆದ 32 ವರ್ಷಗಳಿಂದ ಲಕ್ಷಾಂತರ ಮಂದಿ ಅವಕಾಶ ವಂಚಿತ ಆದಿವಾಸಿ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸದ ಜತೆಗೆ ಊಟ-ಬಟ್ಟೆ ಕೊಟ್ಟು ಅವರನ್ನು ಮುಖ್ಯವಾಹಿನಿಗೆ ತರುತ್ತಿರುವ ಕಿಟ್ ಮತ್ತು ಕಿಸ್ ವಿಶ್ವವಿದ್ಯಾಲಯಗಳ ಕೆಲಸ ಜಗತ್ತಿಗೇ ಅಚ್ಚುಮೆಚ್ಚು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಜಗದೀಶ್ ಶೆಟ್ಟರ್ ಅವರು ಜ. 24, 25ರ ಎರಡು ದಿನಗಳ ಭುವನೇಶ್ವರ ಭೇಟಿಯ ಸಂದರ್ಭದಲ್ಲಿ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT University) ಮತ್ತು ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (KISS University) ಕ್ಯಾಂಪಸ್ಗಳಿಗೆ ಭೇಟಿ ನೀಡಿದರು. ಮಾತ್ರವಲ್ಲದೆ ಲೋಕಸಭಾ ಸದಸ್ಯರು ಹಾಗೂ ವಿಶ್ವವಿದ್ಯಾಲಯಗಳ ಸಂಸ್ಥಾಪಕರಾದ ಅಚ್ಯುತ ಸಮಂತಾ ಅವರ ಜೊತೆ ಸಮಾಜಮುಖಿ ಕೆಲಸಗಳ ಬಗ್ಗೆ ಆತ್ಮೀಯವಾಗಿ ಚರ್ಚೆ ನಡೆಸುತ್ತು ಈ ಪ್ರಶಂಸೆಯನ್ನು ತಿಳಿಸಿದರು.
ಕಳೆದ ಹತ್ತು ವರ್ಷಗಳಲ್ಲಿ ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿನ ಕಳಿಂಗ ಸಂಸ್ಥೆಗೆ ಇದು ನನ್ನ ಮೂರನೇ ಭೇಟಿ. ಸಂಸ್ಥೆ ಅಗಾಧವಾಗಿ ಬೆಳೆಯುತ್ತಲೇ ಇರುವುದರಿಂದ ಪ್ರತಿ ಬಾರಿ ಭೇಟಿ ಕೊಟ್ಟಾಗಲೂ ವಿಶಿಷ್ಟ ಅನುಭವ ನನಗಾಗುತ್ತಿದೆ. ಒಳ್ಳೆಯ ಮನಸ್ಸು ಹಾಗೂ ದುಡಿಯುವ ಹಂಬಲ ಇಟ್ಟುಕೊಂಡು ಹಗಲಿರುಳು ಶ್ರಮಿಸುತ್ತಿರುವ ಅಚ್ಯುತ ಸಮಂತಾ ಅವರ ಸಮಾಜ ಸೇವೆ ಕರ್ನಾಟಕಕ್ಕೂ ವಿಸ್ತರಿಸಲಿ ಎಂದು ಜಗದೀಶ್ ಶೆಟ್ಟರ್ ಆಶಿಸಿದರು.
ಅಚ್ಯುತ ಸಮಂತಾ ಅವರು ತಮ್ಮ ತಾಯಿಯ ಬಗ್ಗೆ ಬರೆದಿರುವ ಪುಸ್ತಕ ಮೈ ಮದರ್ ಮೈ ಹೀರೋ ಮತ್ತು ಕಿಸ್ ಮಕ್ಕಳು ರಚಿಸಿದ ಕಲಾಕೃತಿಯನ್ನು ಜಗದೀಶ್ ಶೆಟ್ಟರ್ ಅವರಿಗೆ ನೆನಪಿನ ಕಾಣಿಕೆಯಾಗಿ ನೀಡಿದರು. ಪ್ರತಿಯಾಗಿ ಜಗದೀಶ್ ಶೆಟ್ಟರ್ ಅವರು ಪ್ರಸಿದ್ಧ ಧಾರವಾಡ ಪೇಡೆಯನ್ನು ಸಮಂತಾ ಅವರಿಗೆ ನೀಡಿ ಶುಭ ಹಾರೈಸಿದರು.