ಬೆಂಗಳೂರು: ಮಂಡ್ಯದಲ್ಲಿ ಅಯೋಜಿಸಲ್ಪಟ್ಟಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ವಿದೇಶಿ ಕನ್ನಡಿಗರು ಭಾಗವಹಿಸುತ್ತಿದ್ದಾರೆ. ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅಮೆರಿಕಾ, ಯುರೋಪ್, ಗಲ್ಫ್, ಏಷಿಯಾ ೆಸಿಫಿಕ್, ಆಸ್ಟ್ರೇಲಿಯಾ ಹೀಗೆ ಜಗತ್ತಿನ ವಿವಿಧ ದೇಶಗಳ ಕನ್ನಡ ಸಂಘಗಳ ಚಟುವಟಿಕೆಗಳಲ್ಲಿ ಭಾಗಿಯಾಗಿ ನೀಡಿದ್ದ ಆಹ್ವಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಗತ್ತಿನ 18 ದೇಶಗಳ ಸುಮಾರು 250ಕ್ಕೂ ಹೆಚ್ಚು ವಿದೇಶಿ ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದು, ಇವರಲ್ಲಿ ಕವಿ ಪುತಿನ ಅವರ ಮಗಳು ಅಲಮೇಲು, ಕಸಾಪ ಸ್ಥಾಪಕರಲ್ಲೊಬ್ಬರಾದ ಕರ್ಪೂರ ಶ್ರೀನಿವಾಸ ರಾವ್ ಮೊಮ್ಮಗಳು ನಿರ್ಮಲಾ ಕರ್ಪೂರ, ಕನ್ನಡ ಶಬ್ದಕೋಶದ ಕರ್ತೃ ಫರ್ಡಿನೆಂಟ್ ಕಿಟೆಲ್ ವಂಶಸ್ಥರು ಪ್ರಮುಖವಾಗಿದ್ದಾರೆ.
ಸಮ್ಮೇಳನದಲ್ಲಿ ಜಾಗತಿಕ ನೆಲೆಯಲ್ಲಿ ಕನ್ನಡ ಸಂಘಟನೆ ಕುರಿತು ಗೋಷ್ಠಿಯೊಂದು ನಡೆಯಲಿದೆ. ವಿದೇಶದಲ್ಲಿ ಕನ್ನಡದ ಕೆಲಸ ಮಾಡುವಲ್ಲಿ ಸಾಧನೆ ಮೆರೆದಿರುವ 21 ವಿದೇಶಿ ಕನ್ನಡಿಗರು ಮತ್ತು ಸಂಸ್ಥೆಗಳನ್ನು ಸನ್ಮಾನಿಸಲಾಗುತ್ತದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.