ಕುಂಭಮೇಳದ ಪ್ರಚಾರಕ್ಕಾಗಿ ಬೆಂಗಳೂರಿನಲ್ಲಿ ರೋಡ್‌ಶೋ, ಲಾಂಚನ ಬಿಡುಗಡೆ

kumba
Published on

ಬೆಂಗಳೂರು: ಭಾರತದ ಬೃಹತ್ ಸಾಂಸ್ಕೃತಿಕ ಮತ್ತು ಧಾರ್ಮಿಕ ಉತ್ಸವ ಮಹಾಕುಂಭ 2025ರ ಯಶಸ್ವಿ ಪ್ರಚಾರಕ್ಕಾಗಿ ಉತ್ತರ ಪ್ರದೇಶ ಸರ್ಕಾರವು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಬೃಹತ್ ರೋಡ್ ಶೋ ನಡೆಸಿತು.

ಯುಪಿ ಹಣಕಾಸು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ದಿವ್ಯಾಂಗರ ಸಬಲೀಕರಣದ ರಾಜ್ಯ ಸಚಿವ ನರೇಂದ್ರ ಕುಮಾರ್ ಕಶ್ಯಪ್ ನೇತೃತ್ವದಲ್ಲಿ ರೋಡ್ ಶೋ ನಡೆಸಲಾಯಿತು. ರಾಜ್ಯಪಾಲರಾದ ಥಾವರ್‌ಚಂದ್ ಗೆಹಲೋತ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ರಾಜ್ಯದ ಜನತೆಗೆ ಕುಂಭಮೇಳಕ್ಕೆ ಆಹ್ವಾನ ನೀಡಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಹಾಕುಂಭವು ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಅರಿವಿನ ಸ್ಫೂರ್ತಿ ಹೊಂದಿದ್ದು, ‘ಏಕ್ ಭಾರತ್- ಶ್ರೇಷ್ಠ ಭಾರತ್ - ಸಮಾವೇಶಿ ಭಾರತ್ ಎನ್ನುವುದನ್ನು ಬಿಂಬಿಸುತ್ತದೆ. ಪ್ರಯಾಗರಾಜ್ನಲ್ಲಿ ನಡೆಯಲಿರುವ ಮಹಾಕುಂಭ-2025ರಲ್ಲಿ 450 ಮಿಲಿಯನ್ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಯಕತ್ವದಲ್ಲಿ 2025ರ ಜ.13 ರಿಂದ ಫೆ.26 ರವರೆಗೆ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ನಡೆಯಲಿದೆ.

ಸ್ವಚ್ಛತೆ ಬಗ್ಗೆ ಅರಿವು, ಆರೋಗ್ಯ ಮತ್ತು ತುರ್ತುಸೇವೆ, ಡಿಜಿಟಲ್ ಸಹಾಯ, ಸಂಪೂರ್ಣ ಮಾಹಿತಿಯುಳ್ಳ ವೆಬ್‌ಸೈಟ್ ಮತ್ತು ಆ್ಯಪ್, 11 ಭಾಷೆಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಸಹಿತ ಚಾಟ್ ಬೊಟ್, ವಾಹನಗಳಿಗೆ ಕ್ಯೂಆರ್ ಆಧರಿತ ಪಾಸ್, ಭದ್ರತೆಗಾಗಿ ಡ್ರೋನ್ ಆಧರಿತ ಪರಿವೀಕ್ಷಣೆ ಮತ್ತು ವಿಪತ್ತು ನಿರ್ವಹಣೆಗೆ ಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಮಹಾಕುಂಭ - 2025 ರ ಲಾಂಚನವನ್ನು ಯುಪಿ ಸಚಿವರಾದ ಸುರೇಶ್ ಕುಮಾರ ಖನ್ನಾ, ನರೇಂದ್ರ ಕುಮಾರ್ ಕಶ್ಯಪ್ ಬಿಡುಗಡೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net