ಬಲವಂತವಾಗಿ ಮೊಟ್ಟೆ ತಿನ್ನಿಸಿದ ಶಿಕ್ಷಕ ಪ್ರಕರಣ ತನಿಖೆಗೆ ಆದೇಶ

egg
Published on

ಶಿವಮೊಗ್ಗ: ಬಿಸಿಯೂಟದಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಬಲವಂತವಾಗಿ ಮೊಟ್ಟೆ ತಿನ್ನಿಸಲಾಗಿದೆ ಎಂಬ ಪ್ರಕರಣ ಈಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಈ ಬಗೆಗೆ ಕರ್ನಾಟಕ ಸರ್ಕಾರ ತನಿಖೆಗೂ ಆದೇಶಿಸಿದೆ.

ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಊಟದ ವೇಳೆ ವಿದ್ಯಾರ್ಥಿನಿಯೊಬ್ಬಳಿಗೆ ಶಿಕ್ಷಕರೊಬ್ಬರು ಬಲವಂತವಾಗಿ ಮೊಟ್ಟೆ ತಿನ್ನಿಸಿದ್ದಾರೆ ಎಂಬ ಆರೋಪ ಇದಾಗಿದೆ.

ಬ್ರಾಹ್ಮಣ ಸಮುದಾಯಕ್ಕೆ ಸೇರಿದ 2ನೇ ತರಗತಿಯ ವಿದ್ಯಾರ್ಥಿನಿಯ ತಂದೆ ಬುಧವಾರ ಶಿಕ್ಷಣ ಇಲಾಖೆಗೆ ಪತ್ರ ಬರೆದು, ಶಾಲಾ ಶಿಕ್ಷಕನ ಕ್ರಮವು ತಮ್ಮ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಶಿಕ್ಷಕರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ತಾವು ಕಟ್ಟುನಿಟ್ಟಾದ ಸಸ್ಯಾಹಾರ ಸೇವಿಸುತ್ತೇವೆ ಎಂದು ಈ ಹಿಂದೆ ಶಾಲಾ ಅಧಿಕಾರಿಗಳಿಗೆ ತಿಳಿಸಿದ್ದೇವು. ಹೀಗಿದ್ದರೂ ಶಾಲೆಯಲ್ಲಿ ಮಧ್ಯಾಹ್ನದ ಊಟ ನೀಡುತ್ತಿದ್ದಾಗ ಶಿಕ್ಷಕರು ತಮ್ಮ ಮಗಳಿಗೆ ಬಲವಂತವಾಗಿ ಮೊಟ್ಟೆ ತಿನ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪದ ವಿಚಾರಣೆ ಕುರಿತು ಮಾಹಿತಿ ಸಂಗ್ರಹಿಸಲು ಬ್ಲಾಕ್ ಶಿಕ್ಷಣಾಧಿಕಾರಿ ಮತ್ತು ಮಧ್ಯಾಹ್ನದ ಊಟದ ಅಟೆಂಡರ್ ಗುರುವಾರ ಶಾಲೆಗೆ ಭೇಟಿ ನೀಡಿದ್ದರು.

‘ಪ್ರಾಥಮಿಕ ವಿಚಾರಣೆ ಅನುಸಾರವಾಗಿ, ಮಧ್ಯಾಹ್ನದ ಊಟ ಬಡಿಸುತ್ತಿದ್ದಾಗ ಈ ಘಟನೆ ನಡೆದಿರುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳ ಗುಂಪು ಸಾಲಾಗಿ ಊಟಕ್ಕೆ ಕುಳಿತಿತ್ತು. ಅಷ್ಟರಲ್ಲೇ ಸಂಬಂಧಪಟ್ಟ ಶಿಕ್ಷಕರು, ಯಾರಿಗೆ ಮೊಟ್ಟೆ ಬೇಕೆಂದು ವಿದ್ಯಾರ್ಥಿಗಳನ್ನು ಕೇಳಿದ್ದಾರೆ. ಈ ಮಗು ಕೂಡ ಸಹಪಾಠಿಗಳೊಂದಿಗೆ ತನ್ನ ಕೈಗಳನ್ನು ಮೇಲಕ್ಕೆತ್ತಿದ್ದರಿಂದ ಮೊಟ್ಟೆಯನ್ನು ಬಡಿಸಲಾಗಿದೆ ಎಂದು ಕಂಡುಬಂದಿದೆ. ಆದರೆ, ಮೊಟ್ಟೆಗಳನ್ನು ತಿನ್ನುವಂತೆ ಯಾವುದೇ ವಿದ್ಯಾರ್ಥಿಯನ್ನು ಒತ್ತಾಯಿಸಲಿಲ್ಲ' ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ನಾವು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ಆದರೆ, ನಮಗೆ ಬಂದ ಮಾಹಿತಿಯ ಆಧಾರದ ಮೇಲೆ ವಿದ್ಯಾರ್ಥಿಗೆ ಬಲವಂತವಾಗಿ ಮೊಟ್ಟೆ ತಿನ್ನಿಸಲಾಗಿಲ್ಲ. ಬ್ಲಾಕ್ ಶಿಕ್ಷಣಾಧಿಕಾರಿ ನೀಡಿರುವ ವರದಿಯನ್ನು ಪರಿಶೀಲಿಸಿ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುತ್ತೇವೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಶಿವಮೊಗ್ಗ) ಪರಮೇಶ್ವರಪ್ಪ ಸಿ ಆರ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net