

Stampede: ಇದೇ ವರ್ಷದ(2025) ಫೆಬ್ರವರಿಯಲ್ಲಿ ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಕಾರಣ ಏನು ಎಂಬುದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಹೌದು, ನಾಲ್ವರು ಮಕ್ಕಳು ಮತ್ತು 11 ಮಹಿಳೆಯರು ಸೇರಿದಂತೆ 18 ಜನರು ಮೃತಪಟ್ಟಿದ್ದ ಕಾಲ್ತುಳಿತಕ್ಕೆ ಕಾರಣ, ''ತಲೆ ಮೇಲೆ ಹೊತ್ತಿದ್ದ ಪ್ರಯಾಣಿಕನಿಂದ ದೊಡ್ಡ ಲಗೇಜ್ ತುಂಡು ಕೆಳಗೆ ಬಿದ್ದಿತು. ಅದನ್ನು ತೆಗೆದುಕೊಳ್ಳಲು ಹೋದಾಗ ಎಡವಿ ಬಿದ್ದಿದ್ದರಿಂದ ನೂಕು ನುಗ್ಗಲು ಏರ್ಪಟ್ಟಿದ್ದರಿಂದ'' ಘಟನೆ ಸಂಭವಿಸಿದೆ ಎಂದು ತಿಳಿಸಿದರು.
ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದ ರಾಮ್ಜಿ ಲಾಲ್ ಸುಮನ್ ಅವರ ಪ್ರಶ್ನೆಗೆ ಉತ್ತರಿಸುತ್ತಾ, "ದುರದೃಷ್ಟಕರ ಘಟನೆ"ಗೆ ಕಾರಣವಾದ ಸಂದರ್ಭಗಳನ್ನು ಪರಿಶೀಲಿಸಲು ರಚಿಸಲಾದ ಉನ್ನತ ಮಟ್ಟದ ತನಿಖಾ ಸಮಿತಿಯ ವರದಿಯಿಂದ ವಿವರಗಳನ್ನು ವೈಷ್ಣವ್ ಹಂಚಿಕೊಂಡರು.
ಕಾಲ್ತುಳಿತದ ತನಿಖೆಗಾಗಿ ರಚಿಸಲಾದ ಸಮಿತಿಯ ವರದಿಯ ಸ್ಥಿತಿ ಮತ್ತು ಸರ್ಕಾರ ತೆಗೆದುಕೊಂಡ ಸರಿಪಡಿಸುವ ಕ್ರಮಗಳ ಬಗ್ಗೆ ಸುಮನ್ ಅವರು ರೈಲ್ವೆ ಸಚಿವರನ್ನು ಕೇಳಿದ್ದರು.
ಪ್ರಯಾಗ್ರಾಜ್ನಲ್ಲಿ ಮಹಾ ಕುಂಭ ಉತ್ಸವದ ಸಮಯದಲ್ಲಿ ಬಿಹಾರಕ್ಕೆ ಹೋಗುವ ರೈಲುಗಳಿಗಾಗಿ ಸಾವಿರಾರು ಜನರು ನಿಲ್ದಾಣದಲ್ಲಿ ಜಮಾಯಿಸಿದ್ದಾಗ, 14 ಮತ್ತು 15 ನೇ ಪ್ಲಾಟ್ಫಾರ್ಮ್ಗಳನ್ನು ಸಂಪರ್ಕಿಸುವ ಮೆಟ್ಟಿಲುಗಳ ಮೇಲೆ ಸಂಜೆ 9:15-9:30 ರ ಸುಮಾರಿಗೆ ಜನದಟ್ಟಣೆಯ ಸಮಯದಲ್ಲಿ ಈ ಕಾಲ್ತುಳಿತ ಸಂಭವಿಸಿತ್ತು(ಏಜೆನ್ಸೀಸ್)