ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಹುಷಾರ್! ಯಾಕೆ ಅಂತೀರಾ? ಈ ಸುದ್ದಿ ಓದಿ

Untitled design (34) (1)
ಎಂ.ಜಿ.ರಸ್ತೆಯ ಎಟಿಎಂ
Published on

ಬೆಂಗಳೂರು: ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಡುವ ಸೋಗಿನಲ್ಲಿ  ಮಹಿಳೆಯರು, ವೃದ್ಧರು, ಅನಕ್ಷರಸ್ಥರನ್ನು ಟಾರ್ಗೆಟ್ ಮಾಡಿ ಅವರಿಂದ ಪಿನ್ ಪಡೆದು ವಂಚಿಸುತ್ತಿದ್ದವರು, ಈಗ ಎಟಿಎಂಗಳಲ್ಲಿ ಹಣ ವಿಥ್ ಡ್ರಾ ಮಾಡಿದರೂ ಮಷಿನ್‌ನಿಂದ ಹಣ ಹೊರಬರದಂತೆ ತಡೆದು ನಂತರ ಲಪಟಾಯಿಸುವ ಹೊಸ ತಂತ್ರ ಹೆಣೆದಿದ್ದಾರೆ.ಸದ್ಯ ಈ ಗ್ಯಾಂಗ್  ಚಿಂತಾಮಣಿಯಲ್ಲಿ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.

ಹೌದು! ಅಂಬಾಜಿದುರ್ಗ ಹೋಬಳಿಯ ಕೋನಪಲ್ಲಿಯ ಕೆ.ರಮೇಶ್ ಎಂಬುವವರು ಜು.27ರಂದು ಬಾಗೇಪಲ್ಲಿ ವೃತ್ತದಲ್ಲಿರುವ ಎಂಟಿಎಂನಲ್ಲಿ  10 ಸಾವಿರ ರೂ. ವಿತ್ ಡ್ರಾ ಮಾಡಲು ಕಾರ್ಡ್ ಹಾಕಿ ಪ್ರಯತ್ನಿಸಿದ್ದಾರೆ, ಆದರೆ ಹಣ ಹೊರಗೆ ಬಂದಿಲ್ಲ. ಸ್ವಲ್ಪ ಹೊತ್ತಾದ ಬಳಿಕ ಹಣ ಡ್ರಾ ಆಗಿರುವ ಮೆಸೇಜ್ ಬಂದಿದೆ. ತಕ್ಷಣ ಗಾಬರಿಗೊಂಡ ರಮೇಶ್ ಸ್ನೇಹಿತರೊಂದಿಗೆ ಎಟಿಎಂ ಬಳಿ ಹೋಗಿ ತಪಾಸಣೆ ಮಾಡಿದಾಗ, ಎಟಿಎಂನಿಂದ ಹಣ ಹೊರ ಬರುವ ಸ್ಥಳದಲ್ಲಿ ಪ್ಲಾಸ್ಟಿಕ್ ಶೀಟ್ ಅಳವಡಿಸಿರುವುದು ಕಂಡು ಬಂದಿದೆ.

ಹತ್ತಿರದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ರಮೇಶ್ ಹಣ ಡ್ರಾ ಮಾಡಿದಾಗ ಹಣ ಬಾರದೆ ವಾಪಸು ಹೊರಟು ಹೋಗಿದ್ದು, ಬಳಿಕ ಇಬ್ಬರು ಎಟಿಎಂ ಒಳ ಬಂದು ಹಣ ತೆಗೆದುಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ರಮೇಶ್ ದೂರು ಸಲ್ಲಿಸಿದ್ದಾರೆ. ಇದೇ ರೀತಿಯ ಪ್ರಕರಣ  ಎಂ.ಜಿ.ರಸ್ತೆಯ ತಪತೇಶ್ವರ ಕಾಲನಿಯ ಎಟಿಎಂನಲ್ಲಿ ಜು.28ರಂದು ನಡೆದಿದ್ದು, ಬೂರಗವಾಕಲ ಹಳ್ಳಿಯ ನಾಗೇಶ್ ಎಂಬುವವರು 5 ಸಾವಿರ ರೂ. ಡ್ರಾ ಮಾಡಲು ಪ್ರಯತ್ನಿಸಿದ್ದಾರೆ,ಆದರೆ, ಹಣ ಹೊರಗೆ ಬಂದಿಲ್ಲ. ಸ್ವಲ್ಪ ಹೊತ್ತು ಅಲ್ಲೇ ಕಾಯ್ದ ಅವರು ಏನಾದರು ಸಮಸ್ಯೆ ಇರಬಹುದು ಎಂದುಕೊಂಡು ಎಟಿಎಂ ಬಿಟ್ಟು ಹೊರ ನಡೆದಿದ್ದಾರೆ.

ಕೆಲ ಸಮಯದ ಬಳಿಕ ಹಣ ಡ್ರಾ ಆಗಿರುವ ಮೆಸೇಜ್ ಬಂದಿದೆ. ಅದೇ ವೇಳೆಗೆ ಇಬ್ಬರು ಎಟಿಎಂ ಒಳಗೆ ಪ್ರವೇಶಿಸಿ ಹೊರ ಬರುವುದನ್ನು ಕಂಡ ನಾಗೇಶ್ ಮತ್ತೆ ಎಟಿಎಂ ಒಳಕ್ಕೆ ಹೋಗಿ ಹಣ ಹೊರಕ್ಕೆ ಬರುವ ಜಾಗ ಪರಿಶೀಲಿಸಿದಾಗ ಕಪ್ಪು ಬಣ್ಣದ ಪ್ಲಾಸ್ಟಿಕ್ ಶೀಟ್ ಅಂಟಿಸಿರುವುದನ್ನು ಕಂಡಿದೆ, ಅದನ್ನು ವಾಹನದ ಕೀಯಿಂದ ಕಿತ್ತಿದ್ದಾರೆ. ಕಪ್ಪು ಪಟ್ಟಿ ಕಿತ್ತಿದ ತಕ್ಷಣ 5 ಸಾವಿರ ರೂ. ಮೌಲ್ಯದ ನೋಟುಗಳು ಹೊರ ಬಂದಿವೆ.

ಸುರಕ್ಷತೆಗೆ ನಿರ್ಲಕ್ಷ್ಯ

ಎರಡು ಕಡೆಗಳಲ್ಲಿ ಒಂದೇ ರೀತಿಯ ಪ್ರಕರಣ ನಡೆದಿರುವುದು ತುಂಬಾ ಗಂಭೀರ ವಿಷಯವಾಗಿದ್ದು, ನಗರದ ಬಹುತೇಕ ಎಟಿಎಂಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಕ ಮಾಡದಿರುವುದೇ ಇದಕ್ಕೆಲ್ಲಾ ಕಾರಣ ಎಂದು ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net