

HD Devegowda: ಭಾರತದ ಆರ್ಥಿಕತೆ ಸತ್ತಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನ್ನು ಖಂಡಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಟ್ರಂಪ್ ಒಬ್ಬ ಅನಾಗರಿಕ ಮತ್ತು ಬೇಜವಾಬ್ದಾರಿ ವ್ಯಕ್ತಿ ಎಂದು ಟೀಕಿಸಿದ್ದಾರೆ.
ಈ ವಿಷಯದ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಎಚ್ಡಿಡಿ, ಟ್ರಂಪ್ ಹೇಳಿಕೆಯಿಂದ ತಮಗೆ ಆಶ್ಚರ್ಯವಾಗಿದ್ದು, ಆಧುನಿಕ ಇತಿಹಾಸದಲ್ಲಿ ಇಷ್ಟು ಅಸ್ಥಿರವಾದ ಮತ್ತೊಂದು ರಾಷ್ಟ್ರದ ಮುಖ್ಯಸ್ಥರನ್ನು ಕಂಡಿಲ್ಲ, ಅವರು ಭಾರತ ಮಾತ್ರವಲ್ಲದೆ, ಪ್ರಪಂಚದ ಪ್ರತಿಯೊಂದು ದೇಶದೊಂದಿಗೆ ಕೆಟ್ಟ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಸಾಲಿಗೆ ಅಮೆರಿಕಾದ ಮಿತ್ರರಾಷ್ಟ್ರಗಳು ಹೊರತಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಕೃಷಿ ಸಚಿವರ ರಾಜೀನಾಮೆಗೆ ಆಗ್ರಹ
ಭಾರತವು ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿದೆ, ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇಂತಹ ವ್ಯವಸ್ಥೆಯನ್ನು 'ಸತ್ತ' ಎಂದು ಕರೆಯಲು ಟ್ರಂಪ್ ಕುರುಡರಾಗಿರಬೇಕು, ಇಲ್ಲವೇ ಮಾಹಿತಿಯ ಕೊರತೆ ಇರಬೇಕು ಎಂದು ಅಭಿಪ್ರಾಯಪಟ್ಟರು.
ಭಾರತದ ಒಬ್ಬ ಸಣ್ಣ ವ್ಯಾಪಾರಿ ಮತ್ತು ಬಡ ರೈತ ಕೂಡ ತನ್ನ ವ್ಯವಹಾರವನ್ನು ಬಹಳ ಘನತೆ, ಸಮಗ್ರತೆ ಮತ್ತು ಮಾನವೀಯತೆಯಿಂದ ನಡೆಸುತ್ತಾನೆ, ಅವರಿಂದಲಾದರೂ ಟ್ರಂಪ್‌ಗೆ ಅನೇಕ ಪಾಠಗಳನ್ನು ಕಲಿಸಬಹುದು. ಅವರಲ್ಲಿ ಮೂಲಭೂತವಾಗಿ ಏನೋ ತಪ್ಪಿದೆ, ಅದನ್ನು ರಾಜತಾಂತ್ರಿಕತೆ ಅಥವಾ ರಾಜಕೀಯದ ಮೂಲಕ ಬಗೆಹರಿಸಲು ಸಾಧ್ಯವಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರ, ನಮ್ಮ ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಳ್ಳದಿರುವುದು ಹೆಮ್ಮೆ ಮತ್ತು ಖುಷಿಯ ಸಂಗತಿ. ಟ್ರಂಪ್ ಬೆದರಿಕೆಗೆ ನಮ್ಮ ಸರ್ಕಾರ ಕಣ್ಣು ಮಿಟುಕಿಸಿಲ್ಲ, ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಅವಲಂಬಿಸಿರುವ ಕೃಷಿ ವಲಯ, ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ರಕ್ಷಿಸಲು ಪೂರ್ಣ ಪ್ರಯತ್ನ ಮಾಡುತ್ತಿರುವುದಕ್ಕಾಗಿ ಮೋದಿ ಸರ್ಕಾರವನ್ನು ಶ್ಲಾಘಿಸಿದರು.
ಈ ಎಲ್ಲ ವಲಯಗಳು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿವೆ, ಮೋದಿ ಸರ್ಕಾರ ತೆಗೆದುಕೊಂಡ ದೃಢ ನಿಲುವು ಅಭೂತಪೂರ್ವ ಪ್ರಮಾಣದ ರಾಷ್ಟ್ರೀಯ ಪುನರುಜ್ಜೀವನಕ್ಕೆ ಕಾರಣವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಟ್ರಂಪ್ ಹೇಳಿಕೆಯನ್ನು ಬೆಂಬಲಿಸಿದ ವಿಪಕ್ಷ ನಾಯಕರ ವಿರುದ್ದವೂ ದೇವೆಗೌಡ ವಾಗ್ದಾಳಿ ನಡೆಸಿದರು.(ಏಜೆನ್ಸೀಸ್)