ಪ್ರೀತಿಗೂ ರಿಜಿಸ್ಟ್ರೇಷನ್ ಕಡ್ಡಾಯವಾದರೆ? ಫೆ. 10ಕ್ಕೆ ಬಿಡುಗಡೆಯಾಗಲಿದೆ ಪೃಥ್ವಿ-ಮಿಲನಾ ಅಭಿನಯದ ಚಿತ್ರ

Foir Registration
Published on

ಬೆಂಗಳೂರು: ಕಳೆದ ವರ್ಷ ಪ್ರಾರಂಭವಾಗಿದ್ದ ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್ ನಾಯಕ-ನಾಯಕಿಯಾಗಿ ನಟಿಸಿರುವ 'ಫಾರ್​ ರಿಜಿಸ್ಟ್ರೇಶನ್​' ಚಿತ್ರವು ಕೆಲವು ತಿಂಗಳ ಹಿಂದೆಯೇ ಮುಕ್ತಾಯವಾಗಿತ್ತು. ಆದರೆ, ಚಿತ್ರ ಯಾವಾಗ ಬಿಡುಗಡೆ ಆಗಬಹುದು ಎಂಬ ವಿಷಯವನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಈಗ ಚಿತ್ರತಂಡದವರು ಕೊನೆಗೂ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದು, 2023ರ ಫೆಬ್ರವರಿ 10ರಂದು ಬಿಡುಗಡೆಯಾಗಲಿದೆ.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಚಿತ್ರದ ಬಿಡುಗಡೆ ದಿನಾಂಕ ಹಾಗೂ ಫಸ್ಟ್ ಲುಕ್ ಅನಾವರಣಗೊಳಿಸಲಾಗಿದೆ. ನಿರ್ಮಾಪಕ ನವೀನ್ ರಾವ್ ಹಾಗೂ ನಿರ್ದೇಶಕ ನವೀನ್ ದ್ವಾರಕನಾಥ್ ಅವರ ಪೋಷಕರು ಫಸ್ಟ್ ಲುಕ್ ಹಾಗೂ ಬಿಡುಗಡೆ ದಿನಾಂಕವನ್ನು ಅನಾವರಣಗೊಳಿಸಿದರು‌.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ನವೀನ್​ ದ್ವಾರಕಾನಾಥ್​, 'ನಾನು ಹಾಗೂ ನಿರ್ಮಾಪಕ ನವೀನ್ ರಾವ್ ಇಬ್ಬರೂ ಸಹಪಾಠಿಗಳು. ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನನಗೆ ಒಂದು ದಿನ ಈ ಚಿತ್ರವನ್ನು ನಿರ್ದೇಶಿಸಲು ಪ್ರೇರೇಪಿಸಿದರು. ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ-ನಾಯಕಿ ಅಂತ ನಿರ್ಧರಿಸಲಾಯಿತು. ಆಗ ಅವರಿಬ್ಬರ 'ದಿಯಾ' ಹಾಗೂ 'ಲವ್ ಮಾಕ್ಟೇಲ್' ಸಿನಿಮಾಗಳು ಯಶಸ್ವಿಯಾಗಿದ್ದವು. ಹೀಗೆ ಚಿತ್ರ ಆರಂಭವಾಗಿ ಈಗ ಬಿಡುಗಡೆ ಹಂತಕ್ಕೆ ತಲುಪಿದೆ. ಫೆಬ್ರವರಿ ಹತ್ತರಂದು ಚಿತ್ರ ಬಿಡುಗಡೆಯಾಗುತ್ತಿದೆ' ಎಂದರು.

ಬೇರೆಲ್ಲದಕ್ಕೂ ರಿಜಿಸ್ಟ್ರೇಶನ್​ ಕಡ್ಡಾಯ. ಪ್ರೀತಿಗೂ ಕಡ್ಡಾಯ ಮಾಡಿದರೆ ಹೇಗೆ ಎಂಬುದೇ ಈ ಚಿತ್ರದ ಕಥೆ ಎನ್ನುವ ಪೃಥ್ವಿ, 'ನಾನು ಆಗಷ್ಟೇ ತುಳು ಚಿತ್ರವೊಂದನ್ನು ಮುಗಿಸಿದ್ದೆ. ನಿರ್ದೇಶಕರು ಮಂಗಳೂರಿಗೆ ಬಂದು ಈ ಚಿತ್ರದ ಕಥೆ ಹೇಳಿದರು. ಕಥೆ ಬಹಳ ಇಷ್ಟವಾಯಿತು. ಎಲ್ಲದ್ದಕ್ಕೂ ರಿಜಿಸ್ಟ್ರೇಷನ್ ಕಡ್ಡಾಯ. ನಾವು ಪ್ರೀತಿಗೂ ರಿಜಿಸ್ಟ್ರೇಷನ್ ಕಡ್ಡಾಯವಾದರೆ ಹೇಗೆ ಎಂಬುದನ್ನು ತೋರಿಸಿದ್ದೇವೆ' ಎಂದರು.

ಮಿಲನಾಗೆ ಫೆಬ್ರವರಿ ತಿಂಗಳೆದರೆ ಲಕ್ಕಿಯಂತೆ. ಏಕೆಂದರೆ, ಈ ಹಿಂದೆ ಅದೇ ತಿಂಗಳಲ್ಲಿ 'ಲವ್​ ಮಾಕ್ಟೇಲ್​' ಮತ್ತು 'ಲವ್ ಮಾಕ್ಟೇಲ್​ 2' ಚಿತ್ರಗಳು ಬಿಡುಗಡೆಯಾಗಿದ್ದು. ಈಗ 'ಫಾರ್​ ರಿಜಿಸ್ಟ್ರೇಶನ್​' ಸಹ ಅದೇ ತಿಂಗಳೂ ಬಿಡುಗಡೆಯಾಗುತ್ತಿರುವುದು ಖುಷಿಯಾಗಿದೆ ಎನ್ನುತ್ತಾರೆ ಮಿಲನಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net