

ರಾಮನಗರ: ಊಟದ ವಿಚಾರಕ್ಕೆ ಶುರುವಾದ ಜಗಳ ತಾಯಿ-ಮಗನ ಸಾವಲ್ಲಿ ಅಂತ್ಯ ಕಂಡ ಘಟನೆ ರಾಮನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಸಂಭವಿಸಿದೆ.
ವಿಜಯಲಕ್ಷ್ಮಿ(45) ಮತ್ತು ಇವರ ಪುತ್ರ ಹರ್ಷ (24) ಮೃತ ದುರ್ದೈವಿಗಳು. ವಿಜಯಲಕ್ಷ್ಮಿ ಕುಟುಂಬ ಬೇಕರಿ ಇಟ್ಟುಕೊಂಡು ಜೀವನ ಸಾಗಿಸುತ್ತಿತ್ತು. ನಿನ್ನೆ(ಶುಕ್ರವಾರ) ತಡರಾತ್ರಿ ಊಟ ಹಾಕಿಕೊಡುವ ವಿಚಾರಕ್ಕೆ ತಾಯಿ-ಮಗ ನಡುವೆ ಶರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ.
ಗಲಾಟೆಯಿಂದ ಬೇಸತ್ತ ತಾಯಿ ಮನೆ ಮುಂದಿನ ನೀರಿನ ಸಂಪಿಗೆ ಬಿದ್ದು ಮೃತಪಟ್ಟಿದ್ದಾರೆ. ತಾಯಿಯ ಸಾವಿಂದ ಕಂಗೆಟ್ಟ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ತಾಯಿ-ಮಗ ದುರಂತ ಅಂತ್ಯ ಕಂಡದ್ದು ವಿಪರ್ಯಾಸ.
ಸ್ಥಳಕ್ಕೆ ಐಜೂರು ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.