

ಗಾಂಧಿನಗರ: ರೈಲ್ವೆ ನಿಲ್ದಾಣಗಳೆಂದರೆ ನಿಮ್ಮ ಕಲ್ಪನೆಗೆ ಬರುವುದು ರೈಲು ಹಳಿಗಳು, ಫ್ಲೈ ಓವರ್ಗಳು, ಟಿಕೆಟ್ ಸೆಂಟರ್, ಇತ್ಯಾದಿಯಷ್ಟೇ. ಆದರೆ ಈ ರೈಲ್ವೆ ನಿಲ್ದಾಣವನ್ನು ನೀವು ನೋಡಿದರೆ, ನಿಮಗೆ ರೈಲ್ವೆ ನಿಲ್ದಾಣದ ಮೇಲಿರುವ ಕಲ್ಪನೆಯೇ ಬದಲಾಗಲಿದೆ. ಏಕೆಂದರೆ ಈ ರೈಲ್ವೆ ನಿಲ್ದಾಣದ ಮೇಲಿರುವುದು ಫೈವ್ ಸ್ಟಾರ್ ಹೋಟೆಲ್!
ಹೌದು! ಪ್ರಧಾನಿ ಮೋದಿಯವರು ದೇಶದ ರೈಲ್ವೆ ನಿಲ್ದಾಣಗಳನ್ನು ಆಧುನಿಕಗೊಳಿಸುವ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಅದನ್ನು ಗುಜರಾತ್ನ ಗಾಂಧಿನಗರ ರೈಲ್ವೆ ನಿಲ್ದಾಣ ಮಾಡಿ ತೋರಿಸಿದೆ. ನೋಡಲು ನಮ್ಮ ಬೆಂಗಳೂರಿನ ಮೆಟ್ರೋ ನಿಲ್ದಾಣದಂತೆಯೇ ಕಾಣುವ ಗಾಂಧಿನಗರ ರೈಲ್ವೆ ನಿಲ್ದಾಣದ ಮೇಲೆ ಫೈವ್ ಸ್ಟಾರ್ ಹೋಟೆಲ್ ಒಂದನ್ನು ನಿರ್ಮಿಸಲಾಗಿದೆ. ಅದಕ್ಕೆ ರೈಲ್ವೆ ನಿಲ್ದಾಣದ ಒಳಗಿನಿಂದಲೇ ಹೋಗುವುದಕ್ಕೂ ಅವಕಾಶ ಮಾಡಿಕೊಡಲಾಗಿದೆ.
ಆ ಫೈವ್ ಸ್ಟಾರ್ ಹೋಟೆಲ್ನಲ್ಲಿ ಪ್ರಾರ್ಥನಾ ಕೋಣೆ, ಗ್ರಂಥಾಲಯ, ಊಟದ ಹಾಲ್ ಸೇರಿ ಅನೇಕ ರೀತಿಯ ವ್ಯವಸ್ಥೆಗಳಿವೆ. ಇನ್ನೂ ವಿಶೇಷವೆಂದರೆ ಆ ಹೋಟೆಲ್ನಲ್ಲಿ ಬರೋಬ್ಬರಿ 300 ರೂಂಗಳಿವೆಯಂತೆ. ಹಾಗೆಯೇ ಪೂರ್ತಿ ಗಾಂಧಿನಗರದಲ್ಲಿ ಅತ್ಯಂತ ಎತ್ತರದ ಬಿಲ್ಡಿಂಗ್ ಅದಾಗಿದೆಯಂತೆ. ಆ ಹೋಟೆಲ್ನಲ್ಲಿ ಮೇಲಿನಿಂದ ನೋಡಿದರೆ ಪೂರ್ತಿ ಗಾಂಧಿನಗರವೇ ಕಾಣುತ್ತದೆಯಂತೆ.
ಕೇವಲ ಹೋಟೆಲ್ ಮಾತ್ರವಲ್ಲದೆ ಆ ರೈಲ್ವೆ ನಿಲ್ದಾಣ ಕೂಡ ಅನೇಕ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ನಿಲ್ದಾಣದ ಬಹುತೇಕ ಭಾಗಗಳಲ್ಲಿ ದೇಶದ ಸಾಂಸ್ಕೃತಿಕತೆ, ವೈಭವವನ್ನು ಸಾರುವ ಚಿತ್ರಗಳನ್ನು ಬಿಡಿಸಲಾಗಿದೆ. ಅಯೋಧ್ಯೆಯ ರಾಮ ಮಂದಿರದ ಚಿತ್ರವನ್ನೂ ಬಿಡಿಸಲಾಗಿದ್ದು, ಪ್ರಯಾಣಿಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. (ಏಜೆನ್ಸೀಸ್)