

ಬೆಂಗಳೂರು: ರಾಜ್ಯದಲ್ಲಿ ಕರೊನಾದ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದೆ. ಆದರೆ ಅನ್ಲಾಕ್ ಹಿನ್ನೆಲೆಯಲ್ಲಿ ಕರೊನಾ ನಿಯಮಗಳನ್ನೇ ಮರೆತ ಜನರು ಮಾಸ್ಕ್, ದೈಹಿಕ ಅಂತರವಿಲ್ಲದೆ ಅಲೆದಾಡಲು ಆರಂಭಿಸಿದ್ದು, ಸೋಂಕು ಮತ್ತೆ ಹೆಚ್ಚುವ ಆತಂಕವೂ ಹೆಚ್ಚಾಗಿದೆ. ನಿನ್ನೆ ಪತ್ತೆಯಾದ ಸೋಂಕಿತರಿಗಿಂತ ಇಂದು ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇಂದು ರಾಜ್ಯದಲ್ಲಿ 1,913 ಜನರಲ್ಲಿ ಕರೊನಾ ಸೋಂಕು ದೃಢವಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 28,74,597ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 48 ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 35,944ಕ್ಕೆ ಹೆಚ್ಚಳವಾಗಿದೆ. 2,489 ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ 28,04,396 ಸೋಂಕಿತರು ಗುಣಮುಖವಾದಂತಾಗಿದೆ. ಸದ್ಯ 34,234 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಇಂದಿನ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 1.53ರಷ್ಟಿದ್ದರೆ ಮರಣ ಪ್ರಮಾಣ 2.5ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ಸೋಂಕು ಏರುಮುಖ ಕಂಡಿದ್ದು, 401 ಪ್ರಕರಣ ದೃಢವಾಗಿದೆ. ಉಳಿದಂತೆ ದಕ್ಷಿಣ ಕನ್ನಡದಲ್ಲಿ 222, ಮೈಸೂರಿನಲ್ಲಿ 198, ಹಾಸನದಲ್ಲಿ 191, ತುಮಕೂರಿನಲ್ಲಿ 170 ಪ್ರಕರಣಗಳು ಕಾಣಿಸಿಕೊಂಡಿವೆ. ಯಾದಗಿರಿಯಲ್ಲಿ ಒಂದೂ ಪ್ರಕರಣ ಪತ್ತೆಯಾಗಿಲ್ಲ. ಬಾಗಲಕೋಟೆ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿ ಸೋಂಕಿತರ ಸಂಖ್ಯೆ ಒಂದಂಕಿಯಲ್ಲಿದೆ. ಬೆಂಗಳೂರಿನಲ್ಲಿ 1,267 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. (ಏಜೆನ್ಸೀಸ್)