ಮೀನುಗಾರ ಸಾವು ಪ್ರಕರಣ, ಅಪರಾಧಿ ಬೋಟ್ ಚಾಲಕನಿಗೆ ಶಿಕ್ಷೆ

crime
Published on

ಕುಂದಾಪುರ: ಗಂಗೊಳ್ಳಿ ಮೀನುಗಾರಿಕಾ ಬಂದರಿನ ಮೀನುಗಾರ ಪ್ರಕಾಶ್ ಪೂಜಾರಿಗೆ ಹಲ್ಲೆ ನಡೆಸಿ ಸಾವಿಗೆ ಕಾರಣನಾಗಿದ್ದ ಬೋಟ್ ಚಾಲಕ ಚಂದ್ರಕಾಂತ್ ಖಾರ್ವಿಯ ಅಪರಾಧ ಸಾಬೀತಾಗಿದ್ದು, ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಶಿಕ್ಷೆ ಪ್ರಕಟಿಸಿದ್ದಾರೆ.

2017 ಸೆ.15ರಂದು ರಾತ್ರಿ ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ಮೀನು ಖಾಲಿ ಮಾಡಲೆಂದು ಪ್ರಕಾಶ ಪೂಜಾರಿ ಬೋಟ್‌ನ ಹಗ್ಗವನ್ನು ಚಂದ್ರಕಾಂತ್ ಚಾಲಕನಾಗಿದ್ದ ಬೋಟ್‌ಗೆ ಕಟ್ಟಿದ್ದರು. ಆಗ ಚಂದ್ರಕಾಂತ ತನ್ನ ಬೋಟ್‌ನಲ್ಲಿದ್ದ ಮರದ ಹಲಗೆಯಿಂದ ಪ್ರಕಾಶ್ ಪೂಜಾರಿ ತಲೆಗೆ ಹೊಡೆದಿದ್ದ. ಆಯತಪ್ಪಿ ಪಂಚಗಂಗಾವಳಿ ಹೊಳೆಗೆ ಬಿದ್ದ ಪ್ರಕಾಶ್ ಪೂಜಾರಿ ಮೃತಪಟ್ಟಿದ್ದು, ಗಂಗೊಳ್ಳಿ ಗ್ರಾಮದ ಬೇಲಿಕೆರೆ ಅರಬ್ಬಿ ಸಮುದ್ರದಲ್ಲಿ ಶವ ಪತ್ತೆಯಾಗಿತ್ತು.

ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಪರಮೇಶ್ವರ ಆರ್.ಗುನಗ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರ ಪೂರ್ಣಗೊಳಿಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗೆ ಐಪಿಸಿ ಕಲಂ 304(2) ಅಡಿಯಲ್ಲಿ 10 ವರ್ಷ ಕಠಿಣ ಸಜೆ ಹಾಗೂ 10 ಸಾವಿರ ದಂಡ, ಕಲಂ 504 ಅಡಿ 2 ವರ್ಷ ಸಜೆ, 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net