ನ.6ಕ್ಕೆ ಬಿಡುಗಡೆಯಾಗಲಿದೆ 'ವಿಜಯಾನಂದ' ಚಿತ್ರದ ಮೊದಲ ಹಾಡು ...

Vijayananda
Published on

ಬೆಂಗಳೂರು: ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಬಯೋಪಿಕ್​ ಆದ 'ವಿಜಯಾನಂದ' ಚಿತ್ರದ ಟೀಸರ್​ ಈಗಾಗಲೇ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಟೀಸರ್​ಗಳು ಅತೀ ಹೆಚ್ಚು ವೀಕ್ಷಣೆ ಪಡೆಯುವುದರ ಜತೆಗೆ, ಸಾವಿರಾರು ಲೈಕ್ಸ್​ಗಳನ್ನು ದಾಖಲಿಸಿ ಪ್ರೇಕ್ಷಕರ ಪ್ರಶಂಸೆಗೆ ಭಾಜನವಾಗಿವೆ.

'ವಿಜಯಾನಂದ' ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಅಂತಿಮ ಹಂತ ತಲುಪಿದ್ದು, ಹಾಡುಗಳು ಬಿಡುಗಡೆಯಾವುದಕ್ಕೆ ಸಜ್ಜಾಗಿದೆ. ಮೊದಲ ಹಂತವಾಗಿ ಇದೇ ಭಾನುವಾರ (ನ.6) ಒರಾಯನ್​ ಮಾಲ್​ನ ಲೇಕ್ ವ್ಯೂನಲ್ಲಿ ಸಂಜೆ ಆರಕ್ಕೆ, ಚಿತ್ರದ ಒಂದು ರೊಮ್ಯಾಂಟಿಕ್​ ಹಾಡು ಬಿಡುಗಡೆಯಾಗಲಿದೆ.

ಜನಪ್ರಿಯ ಸಂಗೀತ ನಿರ್ದೇಶಕ ಗೋಪಿಸುಂದರ್​ ಸಂಯೋಜಿಸಿರುವ ಈ ಹಾಡನ್ನು ಧನಂಜಯ್​ ರಂಜನ್​ ರಚಿಸಿದ್ದು, ವಿಜಯಪ್ರಕಾಶ್​ ಮತ್ತು ಕೀರ್ತನಾ ವೈದ್ಯನಾಥನ್​ ಹಾಡಿದ್ದಾರೆ. 'ಹಾಗೆ ಆದ ಆಲಿಂಗನ ...' ಎಂದು ಸಾಗುವ ಈ ಹಾಡನ್ನು ನಿಹಾಲ್​ ಮತ್ತು ಸಿರಿ ಪ್ರಹ್ಲಾದ್​ ಮೇಲೆ ಚಿತ್ರೀಕರಿಸಲಾಗಿದೆ.

'ಹಾಗೆ ಆದ ಆಲಿಂಗನ ...' ಹಾಡು ಬಿಡುಗಡೆಯ ಜತೆಗೆ ಗೋಪಿಸುಂದರ್​ ಅವರ ಸಂಗೀತ ಕಾರ್ಯಕ್ರಮ ಅಂದು ಸಂಜೆ ನಡೆಯಲಿದೆ. ಈ ಚಿತ್ರದಲ್ಲಿ ಸ್ಯಾಂಡಲ್​ವುಡ್​ನ ಹಲವು ಜನಪ್ರಿಯ ಸೆಲೆಬ್ರಿಟಿಗಳು ಭಾಗವಹಿಸುವ ಸಾಧ್ಯತೆ ಇದೆ.

ವಿಆರ್​ಎಲ್​ ಪ್ರೊಡಕ್ಷನ್ಸ್​ನಡಿ ಡಾ. ಆನಂದ ಸಂಕೇಶ್ವರ ನಿರ್ಮಿಸುತ್ತಿರುವ "ವಿಜಯಾನಂದ' ಚಿತ್ರದಲ್ಲಿ ನಿಹಾಲ್ ರಜಪೂತ್​​, ಅನಂತ್​ ನಾಗ್​, ರವಿಚಂದ್ರನ್​, ವಿನಯಾ ಪ್ರಸಾದ್​, ಸಿರಿ ಪ್ರಹ್ಲಾದ್​ ಮುಂತಾದವರು ನಟಿಸಿದ್ದಾರೆ. ರಿಷಿಕಾ ಶರ್ಮ ಚಿತ್ರಕಥೆ ರಚಿಸುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net