ಚಾರ್ಮಾಡಿ ಘಾಟಿ ಬಾರಿಮಲೆಯಲ್ಲಿ ಬೆಂಕಿ

Baarimale Estate
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಚಾರ್ಮಾಡಿ ಘಾಟಿ ಪರಿಸರದ ಚಿಕ್ಕಮಗಳೂರು ಅರಣ್ಯ ಇಲಾಖೆ ವ್ಯಾಪ್ತಿಯ ಬಾರಿಮಲೆ ಎಸ್ಟೇಟ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಸ್ಥಳೀಯರು ಅರಣ್ಯದ ಕಲ್ಲುಗಳ ಪ್ರದೇಶದಲ್ಲಿ ಒಣಗಿರುವ ಹುಲ್ಲು ಹಾಗೂ ಗಿಡಗಂಟಿಗಳಿಗೆ ಹಚ್ಚಿರುವ ಬೆಂಕಿ ಪರಿಸರ ವ್ಯಾಪಿಸಿರುವ ಶಂಕೆ ವ್ಯಕ್ತವಾಗಿದೆ. ಅರಣ್ಯದ ಅಂಚಿನವರೆಗೂ ಹಬ್ಬಿದ ಬೆಂಕಿಯನ್ನು ಆರಿಸಲಾಗಿದ್ದು, ಯಾವುದೇ ಅಪಾಯದ ಸ್ಥಿತಿ ಇಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಚಾರ್ಮಾಡಿ ಘಾಟಿಯ ವ್ಯೆ ಪಾಯಿಂಟ್‌ನಲ್ಲಿ ನಿಂತು ಗಮನಿಸಿದರೆ ಹಗಲಲ್ಲಿ ದಟ್ಟ ಹೊಗೆ ಆವರಿಸಿರುವುದು ಹಾಗೂ ರಾತ್ರಿ ಸಮಯ ಬೆಂಕಿಯ ಪ್ರಖರತೆ ಕಳೆದ ಎರಡು ದಿನಗಳಿಂದ ಕಂಡು ಬರುತ್ತಿರುವ ಕುರಿತು ವಾಹನ ಸವಾರರು ತಿಳಿಸಿದ್ದಾರೆ. ಕಳೆದ ವಷರ್ ಘಾಟಿಯ ಕೆಲಭಾಗಗಳಲ್ಲಿ ಕಾಡ್ಗಿಚ್ಚು ಉಂಟಾಗಿದ್ದು, ಹಲವಾರು ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು.

ದ.ಕ.ಕ್ಕೆ ಸಾಧ್ಯತೆ ಇಲ್ಲ

ಪ್ರಸ್ತುತ ಬೆಂಕಿ ಕಲ್ಲುಗಳ ಪ್ರದೇಶದಲ್ಲಿ ಇದ್ದು ಬಾರಿಮಲೆ ಒಂದು ಭಾಗದ ಕಡೆ ಹಳ್ಳ ಇನ್ನೊಂದು ಕಡೆ ಹೊಳೆ ಇದೆ. ಈ ಕಾರಣದಿಂದ ಚಾರ್ಮಾಡಿ ಅರಣ್ಯ ಹಾಗೂ ಇನ್ನೊಂದು ಬದಿಯಲ್ಲಿರುವ ನೆರಿಯ ಮೀಸಲು ಅರಣ್ಯಕ್ಕೆ ಹಬ್ಬುವ ಸಾಧ್ಯತೆ ಇಲ್ಲ. ಚಾರ್ಮಾಡಿ ಉಪವಲಯ ಅರಣ್ಯಾಧಿಕಾರಿ ರವೀಂದ್ರ ಅಂಕಲಗಿ, ಸಿಬ್ಬಂದಿ ರವಿ ಹಾಗೂ ಗೋಪಾಲ್ ದ.ಕ. ವಿಭಾಗದ ಘಾಟಿ ಹಾಗೂ ಅರಣ್ಯದ ಹಲವು ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದು, ಯಾವುದೇ ಅಪಾಯದ ಸನ್ನಿವೇಶ ಇಲ್ಲ ಎಂದು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಬಿ.ಜಿ. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net