ಗಡ್ಡ-ಮೀಸೆ ಬಗ್ಗೆ ತಮಾಷೆ ಮಾಡಿ ಇಕ್ಕಟ್ಟಿಗೆ ಸಿಲುಕಿದ ಮಹಿಳೆ; ಕೇಸ್​ ಬಿತ್ತು, ಕ್ಷಮೆ ಕೂಡ ಕೇಳಿದ್ಲು..

Bharti sing
Published on

ಪಂಜಾಬ್​: ಗಡ್ಡ ಎಳೆದವನಿಗೆ ಮಿಠಾಯಿ ಎಂಬ ಹಳೇ ಮಾತೊಂದಿದೆ. ಆದರೆ ಪುರುಷರ ಕಾಲೆಳೆಯಲು ಹೋಗಿ ಗಡ್ಡದ ವಿಷಯವನ್ನು ಎಳೆದು ತಂದು ತಮಾಷೆ ಮಾಡಿದ ಕಾಮಿಡಿಯನ್ ಮಹಿಳೆಯೊಬ್ಬಳು ಇಕ್ಕಟ್ಟಿಗೆ ಸಿಲುಕಿದ್ದು, ಕೊನೆಗೆ ಕ್ಷಮೆ ಯಾಚಿಸುವಂತಾಗಿದೆ. ಮಾತ್ರವಲ್ಲ, ಆಕೆಯ ವಿರುದ್ಧ ಎಫ್​ಐಆರ್ ಕೂಡ ದಾಖಲಾಗಿದೆ.

ಪಂಜಾಬ್​ನ ಕಾಮಿಡಿಯನ್ ಭಾರತಿ ಸಿಂಗ್ ಎಂಬಾಕೆ, ವಿಡಿಯೋ ಒಂದರಲ್ಲಿ ಆಡಿದ್ದ ಮಾತುಗಳೇ ಆಕೆಗೆ ಮುಳುವಾಗಿದ್ದು, ಅದು ವೈರಲ್ ಕೂಡ ಆಗಿದೆ. ಪುರುಷರ ಕುರಿತು ಮಾತನಾಡಿದ್ದ ಈಕೆ, ಗಡ್ಡ ಹಾಗೂ ಮೀಸೆಯಿಂದ ಹಲವು ಪ್ರಯೋಜನ ಇದೆ. ಹಾಲು ಕುಡಿದು ಬಾಯೊಳಗೆ ಗಡ್ಡದ ಒಂದೆರಡು ಕೂದಲು ಹಾಕಿಕೊಳ್ಳಿ, ಅದು ಶಾವಿಗೆ ಥರ ರುಚಿ ಕೊಡುತ್ತೆ ಎಂದಿದ್ದ ಈಕೆ, ಪುರುಷರ ಗಡ್ಡದಲ್ಲಿ ಹೇನೂ ಇರುತ್ತೆ ಎಂದು ಹೇಳಿದ್ದ ವಿಡಿಯೋ ಕಳೆದೆರಡು ದಿನಗಳಿಂದ ಹರಿದಾಡಿತ್ತು.

ಈ ಕುರಿತು ಸೋಮವಾರ ರಾತ್ರಿ ಪಂಜಾಬ್​ನ ಅಮೃತಸರ ಪೊಲೀಸರಿಗೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿಯವರು ದೂರು ನೀಡಿದ್ದು, ಭಾರತಿ ಸಿಂಗ್ ಹೇಳಿಕೆಯಿಂದ ಸಿಖ್ಖರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ದೂರಿನ ಮೇರೆಗೆ ಭಾರತಿ ಸಿಂಗ್ ವಿರುದ್ಧ ಕೇಸು ದಾಖಲಾಗಿದೆ.

ಅಷ್ಟೇ ಅಲ್ಲದೆ ಭಾರತಿ ಸಿಂಗ್ ವಿರುದ್ಧ ಸಿಖ್ ಸಮುದಾಯದವರು ಭಾರಿ ಪ್ರತಿಭಟನೆಯನ್ನೂ ಮಾಡಿದ್ದು, ಇದರಿಂದ ಮೆತ್ತಗಾದ ಭಾರತಿ ಸಿಂಗ್ ಕ್ಷಮೆ ಯಾಚಿಸಿದ್ದು, ತಾವು ಯಾರನ್ನೂ ನೋಯಿಸುವ ದೃಷ್ಟಿಯಲ್ಲಿ ಹಾಗೆ ಹೇಳಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ನಾನು ಕೂಡ ಪಂಜಾಬಿನವಳೇ, ಅಮೃತಸರದಲ್ಲಿ ಹುಟ್ಟಿದ್ದು, ನನಗೆ ಪಂಜಾಬಿಗರ ಬಗ್ಗೆ ಗೌರವವಿದೆ ಎಂದೂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net