ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟು ಪೋಸ್​ ನೀಡಿದ ಆಸೀಸ್​ ಆಟಗಾರನ ವಿರುದ್ಧ ದಾಖಲಾಯ್ತು ಎಫ್‌ಐಆರ್‌

Mitchell Marsh
Published on

ಲಖನೌ: ಏಕದಿನ ವಿಶ್ವಕಪ್​ ಟೂರ್ನಿಯ ಫಿನಾಲೆ ಮುಗಿದು ಒಂದು ವಾರ ಕಳೆಯುತ್ತಾ ಬಂದರು ಭಾರತದ ಅಭಿಮಾನಿಗಳಿಗೆ ಸೋಲಿನ ಕಹಿ ನೆನಪು ಬಿಟ್ಟು ಬಿಡದಂತೆ ಕಾಡುತ್ತಿದೆ. 6 ಬಾರಿ ಏಕದಿನ ವಿಶ್ವಕಪ್​ ಗೆದ್ದು ಬೀಗುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಇದೀಗ ಸಂಕಷ್ಟ ಒಂದು ಎದುರಾಗಿದ್ದು, ತಂಡದ ಪ್ರಮುಖ ಆಟಗಾರನ ವಿರುದ್ಧ FIR ದಾಖಲಾಗಿದೆ.

ಆಸ್ಟ್ರೇಲಿಯಾ ತಂಡದ ಆಟಗಾರ ಮಿಚೆಲ್​ ಮಾರ್ಷ್​ ವಿಶ್ವಕಪ್​ ಟ್ರೋಫಿಯ ಮೇಲೆ ಕಾಲನ್ನು ಇರಿಸಿ ಫೋಟೋವನ್ನು ತೆಗೆಸಿಕೊಂಡಿದ್ದರು. ಈ ಫೋಟೋವನ್ನು ಸ್ವತಃ ಆಸ್ಟ್ರೇಲಿಯಾ ತಂಡದ ಆಟಗಾರ ಪ್ಯಾಟ್​ ಕಮ್ಮಿನ್ಸ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ದೊಡ್ಡ ಪ್ರಶಸ್ತಿಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಕ್ರೀಡಾಭಿಮಾನಿಗಳು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದೀಗ ವಿಶ್ವಕಪ್​ಗೆ ಅಗೌರವ ತೋರಿದ್ಧಾರೆ ಎಂದು ಆರೋಪಿಸಿ ಆಸೀಸ್​ ಆಟಗಾರ ಮಿಚೆಲ್​ ಮಾರ್ಷ್​ ವಿರುದ್ಧ ಉತ್ತರಪ್ರದೇಶದ ಆಲಿಘರ್​ನಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ. ಆರ್​ಟಿಐ ಕಾರ್ಯಕರ್ತ ಪಂಡಿತ್​ ಕೇಶವ್​ ಮಿಚೆಲ್​ ಮಾರ್ಷ್​ ವಿರುದ್ಧ ದೂರು ದಾಖಲಿಸಿದ್ದು, ವಿಶ್ವಕಪ್​ ಟ್ರೋಫಿಯ ಮೇಲೆ ಕಾಲಿಡುವ ಮೂಲಕ ಕ್ರೀಡಾಭಿಮಾನಿಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಪಂಡಿತ್​ ಕೇಶವ್​ ಅವರ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿರುವಂತೆ ಕಾಣುತ್ತಿದ್ದು, ಮಿಚೆಲ್​ ಮಾರ್ಷ್​ ವಿರುದ್ಧ FIR ದಾಖಲಿಸಿದ್ದು ನೋಟಿಸ್​ ನೀಡಲು ಸಿದ್ದತೆ ನಡೆಸಿದ್ದಾರೆ. ಇತ್ತ ದೂರುದಾರರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕಲೆವರು ಇವರ ನಡೆಯನ್ನು ಪ್ರಶಂಸಿದ್ದಾರೆ. ಇನ್ನು ಕೆಲವರು ಇದು ಹುಚ್ಚತನದ ಪರಮಾವಧಿ ಎಂದು ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net