

ಕೋಲಾರ: ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟ, ಗುಂಪಿನ ಸದಸ್ಯರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದರೂ ಅಲ್ಲಿಯೂ ಮುಂದುವರಿದು, ಆಸ್ಪತ್ರೆಯ ವಾರ್ಡ್ನೊಳಗೂ ಮಾರಾಮಾರಿ ನಡೆದ ಪ್ರಸಂಗವೊಂದು ವರದಿಯಾಗಿದೆ.
ಕೋಲಾರ ಜಿಲ್ಲೆಯ ಕಠಾರಿಪಾಳ್ಯದಲ್ಲಿ ಈ ಗುಂಪುಘರ್ಷಣೆ ನಡೆದಿದೆ. ಅಪರಂಜಿ ನಾರಾಯಣಸ್ವಾಮಿ ಮತ್ತು ಗಂಗಾಧರ ಎಂಬವರ ಬಣಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಗುಂಪಿನ ಸದಸ್ಯರು ಹಿಗ್ಗಾಮುಗ್ಗಾ ಹೊಡೆದಾಡಿಕೊಂಡಿದ್ದಾರೆ. ಈ ಜಗಳದಲ್ಲಿ ಐವರು ಗಾಯಗೊಂಡಿದ್ದು ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ದುರಂತವೆಂದರೆ ಆಸ್ಪತ್ರೆಗೆ ಸೇರಿದ ಮೇಲೂ ಈ ಹೊಡೆದಾಟ ಮುಂದುವರಿದಿದ್ದು, ಜಿಲ್ಲಾಸ್ಪತ್ರೆಯ ವಾರ್ಡ್ನೊಳಗೂ ಎರಡು ಗುಂಪಿನ ಸದಸ್ಯರ ನಡುವೆ ಮಾರಾಮಾರಿ ನಡೆದಿದೆ. ಹೊಡೆದಾಟದಿಂದಾಗಿ ವಾರ್ಡ್ನಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿದ್ದಲ್ಲದೆ, ಅಲ್ಲಿನ ಬೆಡ್ಗಳೆಲ್ಲ ಚದುರಿಹೋಗಿವೆ.
ವಾರ್ಡ್ ಒಳಗೆ ನಡೆದ ಹೊಡೆದಾಟದ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಮತ್ತೊಂದೆಡೆ ಕಠೋರಿಪಾಳ್ಯ ಬೂದಿಮುಚ್ಚಿದ ಕೆಂಡದಂತಾಗಿದ್ದು, ಅಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.