ಎಡಿಜಿಪಿ ಅಲೋಕ್​ಕುಮಾರ್​ಗೆ ಮತ್ತೆ ಟೆನ್ಷನ್​?; ಫೋನ್​ ಕರೆ ಕದ್ದಾಲಿಕೆ​ ಪ್ರಕರಣದ ಮರು ತನಿಖೆ ನಡೆಸಿ ವರದಿ ಸಲ್ಲಿಸಲು ಕೋರ್ಟ್ ಆದೇಶ

Untitled-1
Published on

ಬೆಂಗಳೂರು: ಫೋನ್​ ಟ್ಯಾಪಿಂಗ್​ ಪ್ರಕರಣವೊಂದರ ಕುರಿತಂತೆ ಕೋರ್ಟ್ ನೀಡಿರುವ ಆದೇಶ ಹೊರಬಿದ್ದಿದ್ದು, ಇದೀಗ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಡುವಿನ ಹಗ್ಗ-ಜಗ್ಗಾಟ ಮತ್ತಷ್ಟು ಚುರುಕುಗೊಳ್ಳುವ ಲಕ್ಷಣಗಳು ಗೋಚರಿಸಿವೆ. ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ಈ ಬೆಳವಣಿಗೆಗಳಿಗೆ ಕಾರಣವಾಗಿದೆ.

ಫೋನ್​ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಭಾಸ್ಕರ್​ ರಾವ್​ ಅವರು ಸಿಬಿಐ ಬಿ-ರಿಪೋರ್ಟ್​ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದರೆ, ಮತ್ತೊಂದೆಡೆ ಸಿಬಿಐ ಅಧಿಕಾರಿಗಳು ಸಲ್ಲಿಸಿರುವ ಬಿ-ರಿಪೋರ್ಟ್ ಕೂಡ ನ್ಯಾಯಾಲಯದಿಂದ ತಿರಸ್ಕೃತಗೊಂಡಿದೆ.

ಎಚ್​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಮೈತ್ರಿ ಸರ್ಕಾರದ ಅವಧಿಯಲ್ಲಿ 2018ರ ಆಗಸ್ಟ್​ 1ರಿಂದ ಅಲೋಕ್​ಕುಮಾರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಫೋನ್​ ಕರೆಗಳನ್ನು ಕದ್ದು ಆಲಿಸಿದ್ದರು ಎಂದು ಅನರ್ಹ ಶಾಸಕ್​ ಎಚ್​. ವಿಶ್ವನಾಥ್ ಸೇರಿ ಕೆಲವು ಶಾಸಕರು ಆರೋಪಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಕರೆಯನ್ನೂ ಅಲೋಕ್​ಕುಮಾರ್ ಕದ್ದು ಆಲಿಸಿದ್ದರು ಎನ್ನಲಾಗಿದೆ. ನಂತರ ಪ್ರಕರಣವನ್ನು ಬಿ.ಎಸ್​. ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ವಹಿಸಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಅಲೋಕ್​ಕುಮಾರ್​ ಅವರಿಗೆ ಸಂಬಂಧಿಸಿದಂತೆ ಬಿ-ರಿಪೋರ್ಟ್ ಸಲ್ಲಿಸಿದ್ದರು. ಆದರೆ ಇದನ್ನು ಪ್ರಶ್ನಿಸಿ ಭಾಸ್ಕರ್​ ರಾವ್ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದ್ದು, ಬಿ-ರಿಪೋರ್ಟ್​ ಕೂಡ ರದ್ದುಗೊಳಿಸಿದೆ. ಮಾತ್ರವಲ್ಲದೆ ಪುನಃ ತನಿಖೆ ನಡೆಸುವಂತೆ ವರದಿ ಸಲ್ಲಿಸುವಂತೆ ಆದೇಶಿಸಿದೆ. ಇದರಿಂದ ಅಲೋಕ್​ಕುಮಾರ್ ಅವರಿಗೆ ಮತ್ತೆ ಟೆನ್ಷನ್​ ಉಂಟಾಗಿದ್ದರೂ ಅಚ್ಚರಿ ಇಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net